ನಿಮ್ಮ ಲಿಪಿಯನ್ನು ಸಹಜವಾಗಿ ಓದಬಲ್ಲ ತಜ್ಞರು ತೀರ್ಪು ನೀಡುವ, ಲ್ಯಾಟಿನ್ ಹೊರತಾದ ಸಂವಹನ ವಿನ್ಯಾಸಕ್ಕಾಗಿ ವಿಶ್ವದ ಮೊದಲ ಜಾಗತಿಕ ಪುರಸ್ಕಾರ
ಆತ್ಮೀಯರೇ!
ಲ್ಯಾಟಿನ್ ಹೊರತಾದ ಸಂವಹನ ವಿನ್ಯಾಸಕ್ಕಾಗಿ ವಿಶ್ವದ ಮೊದಲ ಸ್ಪರ್ಧೆಯಾದ GRANSHAN Bloom Award – ಮೊದಲ ಆವೃತ್ತಿ 2026ಕ್ಕೆ ಕೃತಿಗಳನ್ನು ಸಲ್ಲಿಸಲು ನೀವು ಆಸಕ್ತಿ ತೋರಿರುವುದು ನಮಗೆ ಬಹಳ ಸಂತೋಷ ತಂದಿದೆ.
ಸಲ್ಲಿಕೆಗೆ ಬೇಕಾದ ಎಲ್ಲ ಮಾಹಿತಿಯನ್ನು ಕೆಳಗೆ ವಿವರವಾಗಿ ನೀಡಿದ್ದೇವೆ. ಸ್ಪರ್ಧೆಗೆ ಸಲ್ಲಿಕೆ ಹೇಗಿರಬೇಕು ಮತ್ತು ತೀರ್ಪು ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ಈ ಮಾರ್ಗಸೂಚಿಗಳ ಮೂಲಕ ಸ್ಪಷ್ಟವಾಗಿ, ಸುಲಭವಾಗಿ ತಿಳಿಸಲು ಬಯಸುತ್ತೇವೆ. ನಿಮ್ಮ ಕೃತಿಯನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸಲು ಅಗತ್ಯವಾದ ಮಾರ್ಗದರ್ಶನ ಮತ್ತು ಒಳನೋಟಗಳನ್ನು ಒದಗಿಸುವುದು ನಮ್ಮ ಉದ್ದೇಶ – ನಿಮ್ಮ ಸೃಜನಶೀಲತೆ ಸಂಪೂರ್ಣವಾಗಿ ಅರಳಲಿ.
ಈ ಎಲ್ಲ ಮಾಹಿತಿಯು ಡೌನ್ಲೋಡ್ ವಿಭಾಗದಲ್ಲಿ PDF ರೂಪದಲ್ಲಿಯೂ ಲಭ್ಯವಿದೆ.
ಸಲ್ಲಿಸಬೇಕಾದ ಅಂಶಗಳ ಕುರಿತು ಇಲ್ಲಿ ನೀಡಿರುವ ವಿವರವಾದ ಸೂಚನೆಗಳನ್ನು ದಯವಿಟ್ಟು ಪಾಲಿಸಿ! ನೀವು ನಮ್ಮ ಪದೇ ಪದೇ ಕೇಳುವ ಪ್ರಶ್ನೆಗಳ ವಿಭಾಗವನ್ನೂ ನೋಡಬಹುದು.
ನಿಮ್ಮ ಸಲ್ಲಿಕೆಗಳನ್ನು ಎದುರುನೋಡುತ್ತಿದ್ದೇವೆ!
GRANSHAN ತಂಡ
ಯಾರು ಭಾಗವಹಿಸಬೇಕು?
GRANSHAN Bloom Award ಆಹ್ವಾನಿಸುವವರು:
ವಿನ್ಯಾಸಕರು, ಅಕ್ಷರ ಸಂಯೋಜಕರು ಮತ್ತು ಸೃಜನಾತ್ಮಕ ನಿರ್ದೇಶಕರು
ಸ್ಟುಡಿಯೊಗಳು, ಏಜೆನ್ಸಿಗಳು ಮತ್ತು ಸಂಸ್ಥೆಗಳ ಆಂತರಿಕ ವಿನ್ಯಾಸ ತಂಡಗಳು
ಪ್ರಕಾಶಕರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು
ವಿದ್ಯಾರ್ಥಿಗಳು ಮತ್ತು ಇತ್ತೀಚೆಗೆ ಪದವಿ ಪಡೆದವರು
ಲ್ಯಾಟಿನ್ ಹೊರತಾದ ಲಿಪಿಗಳ ಸನ್ನಿವೇಶದಲ್ಲಿ ಕೆಲಸ ಮಾಡುವ ಬ್ರ್ಯಾಂಡ್ಗಳು ಮತ್ತು ಸಂಸ್ಥೆಗಳು
ಸಂಸ್ಕೃತಿಗಳನ್ನು ಬೆಸೆಯಲು, ಕಥೆಗಳನ್ನು ಹೇಳಲು ಮತ್ತು ಗುರುತನ್ನು ರೂಪಿಸಲು ನಿಮ್ಮ ಕೃತಿ ಅಕ್ಷರ ಸಂಯೋಜನೆಯನ್ನು ಬಳಸಿದರೆ, ಈ ಸ್ಪರ್ಧೆ ನಿಮಗಾಗಿ.
ಅರ್ಹತೆಯ ಅವಧಿ
2023ರ ಜನವರಿಯಿಂದ 2026ರ ಡಿಸೆಂಬರ್ವರೆಗೆ ರಚಿಸಿದ ಅಥವಾ ಮೊದಲ ಬಾರಿಗೆ ಪ್ರಕಟಿಸಿದ ಕೃತಿಗಳು ಸಲ್ಲಿಕೆಗೆ ಅರ್ಹವಾಗಿವೆ. ಪ್ರಕಟಣೆ ಅಥವಾ ಪೂರ್ಣಗೊಳಿಸಿದ ದಿನಾಂಕವು ಈ ಅವಧಿಯೊಳಗೆ ಇರಬೇಕು. 2023ರ ಜನವರಿಗೂ ಮೊದಲು ರಚಿಸಿದ ಕೃತಿಗಳು ಇನ್ನೂ ಬಳಕೆಯಲ್ಲಿದ್ದರೂ ಅಥವಾ ವಿತರಣೆಯಲ್ಲಿದ್ದರೂ ಅರ್ಹವಾಗುವುದಿಲ್ಲ.
ಲಿಪಿ ಗುಂಪುಗಳು ಮತ್ತು ಮಾಧ್ಯಮ ವಿಭಾಗಗಳು
GRANSHAN Bloom Award ವಿವಿಧ ಸಂಸ್ಕೃತಿಗಳು, ಲಿಪಿಗಳು ಮತ್ತು ವಿನ್ಯಾಸ ಕ್ಷೇತ್ರಗಳ ಅಕ್ಷರ ಸಂಯೋಜನೆಯ ಉತ್ಕೃಷ್ಟತೆಯನ್ನು ಸಂಭ್ರಮಿಸುತ್ತದೆ. ಇದರ ಕೇಂದ್ರದಲ್ಲಿರುವ ವಿಶಿಷ್ಟ ತೀರ್ಪುಗಾರರ ರಚನೆಯು ಆಳವಾದ ಸಾಂಸ್ಕೃತಿಕ ಅರಿವು ಮತ್ತು ವೃತ್ತಿಪರ ಕೌಶಲವನ್ನು ಒಟ್ಟುಗೂಡಿಸುತ್ತದೆ: ಪ್ರತಿ ಸಲ್ಲಿಕೆಯನ್ನೂ ಅದರಲ್ಲಿ ಬಳಸಿರುವ ಲಿಪಿ ಮತ್ತು ಅದು ರೂಪುಗೊಂಡಿರುವ ಮಾಧ್ಯಮ ಎರಡನ್ನೂ ಅರ್ಥಮಾಡಿಕೊಳ್ಳುವ ತಜ್ಞರು ಪರಿಶೀಲಿಸುತ್ತಾರೆ.
ಲಿಪಿ ಗುಂಪುಗಳು
ಅರೇಬಿಕ್ ಮತ್ತು ಚೀನೀಯಿಂದ ಗ್ರೀಕ್, ಜಪಾನೀ, ಕೊರಿಯನ್ ಹಾಗೂ ಇನ್ನೂ ಅನೇಕ ಲಿಪಿಗಳವರೆಗೆ, ನಮ್ಮ ಲಿಪಿ ಗುಂಪುಗಳು ಜಗತ್ತಿನ ಲಿಪಿಗಳ ಸಾಂಸ್ಕೃತಿಕ ಮತ್ತು ಅಕ್ಷರ ಸಂಯೋಜನೆಯ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಲಿಪಿ ಗುಂಪನ್ನು ಆ ಲಿಪಿಯನ್ನು ಸಹಜವಾಗಿ ಓದಬಲ್ಲ ಅಥವಾ ಮೂಲ ಲಿಪಿಯ 12 – 15 ತಜ್ಞರು ಪ್ರತಿನಿಧಿಸುತ್ತಾರೆ. ಅವರಿಗೆ ನಿಮ್ಮ ಕೃತಿಯ ಭಾಷಿಕ ಮತ್ತು ಸಾಂಸ್ಕೃತಿಕ ಸನ್ನಿವೇಶದ ಆಳವಾದ ಅರಿವಿರುತ್ತದೆ. ಪ್ರತಿ ಲಿಪಿ ಗುಂಪಿನಲ್ಲಿ ಸಂಪಾದಕೀಯ ವಿನ್ಯಾಸದಿಂದ ಮೋಷನ್ ಗ್ರಾಫಿಕ್ಸ್, ಸ್ಥಳ ವಿನ್ಯಾಸ ಮತ್ತಿತರ ಮಾಧ್ಯಮ ವಿಭಾಗಗಳ ಮಾಧ್ಯಮ ತಜ್ಞರಿರುತ್ತಾರೆ.
ಕೆಲವು ಮಾಧ್ಯಮ ವಿಭಾಗಗಳಿಗೆ ಅದೇ ತಜ್ಞರು ಒಟ್ಟಾಗಿ ತೀರ್ಪು ನೀಡುತ್ತಾರೆ – ಉದಾಹರಣೆಗೆ, ಪುಸ್ತಕ ವಿನ್ಯಾಸದ ತಜ್ಞರು ಪೋಸ್ಟರ್ ಕೃತಿಗಳನ್ನೂ ಮೌಲ್ಯಮಾಪನ ಮಾಡಬಹುದು. ಇದರಿಂದ ನಿಮ್ಮ ಯೋಜನೆಗೆ ನಿರ್ದಿಷ್ಟ ಕ್ಷೇತ್ರದ ಆಳವಾದ ಜ್ಞಾನ ಹಾಗೂ ಅಕ್ಷರ ಸಂಯೋಜನೆಯ ಉತ್ಕೃಷ್ಟತೆಯ ಸಮಗ್ರ ದೃಷ್ಟಿಕೋನ ಎರಡರ ಪ್ರಯೋಜನವೂ ದೊರೆಯುತ್ತದೆ.
2026ರ ಆವೃತ್ತಿಗಾಗಿ, GRANSHAN Bloom Award ಈ ಕೆಳಗಿನ 8 ಲಿಪಿ ಗುಂಪುಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:
ಅರೇಬಿಕ್ ಮೂಲದ ಲಿಪಿಗಳು (ಅರೇಬಿಕ್, ಪರ್ಷಿಯನ್, ಕುರ್ದಿಶ್, ಉರ್ದು)
ಅರ್ಮೇನಿಯನ್
ಚೀನೀ (ಸಾಂಪ್ರದಾಯಿಕ ಅಥವಾ ಸರಳೀಕೃತ)
ಗ್ರೀಕ್
ದಕ್ಷಿಣ ಏಷ್ಯಾದ ಲಿಪಿಗಳು (ಗುರುಮುಖಿ, ದೇವನಾಗರಿ, ಗುಜರಾತಿ, ಬಂಗಾಳಿ, ತೆಲುಗು, ಕನ್ನಡ, ಮಲಯಾಳಂ, ತಮಿಳು, ಸಿಂಹಳ)
ಜಪಾನೀ
ಕೊರಿಯನ್
ಆಗ್ನೇಯ ಏಷ್ಯಾದ ಲಿಪಿಗಳು (ಥಾಯ್, ಬರ್ಮೀಸ್, ಲಾವೊ, ಖ್ಮೇರ್)
ಭವಿಷ್ಯದ ಆವೃತ್ತಿಗಳಲ್ಲಿ ಈ ಲಿಪಿ ಗುಂಪುಗಳನ್ನು ವಿಸ್ತರಿಸಿ ಸಿರಿಲಿಕ್, ಜಾರ್ಜಿಯನ್, ಹೀಬ್ರೂ ಮತ್ತು ಪ್ಯಾನ್-ಆಫ್ರಿಕನ್ ಲಿಪಿಗಳಂತಹ ಇನ್ನಷ್ಟು ಲಿಪಿಗಳನ್ನು ಸೇರಿಸಲಾಗುತ್ತದೆ.
ಮಾಧ್ಯಮ ವಿಭಾಗಗಳು
ಈ ಅಕ್ಷರ ಸಂಯೋಜನೆಯ ವೈವಿಧ್ಯದ ಜೊತೆಗೆ ಸ್ಪರ್ಧೆಯು 9 ಮಾಧ್ಯಮ ವಿಭಾಗಗಳನ್ನು ಒಳಗೊಂಡಿದೆ – ಪ್ರತಿಯೊಂದೂ ಅಕ್ಷರ ಸಂಯೋಜನೆಯಲ್ಲಿ ಅಸಾಧಾರಣ ಸೃಜನಶೀಲತೆಗೆ ತನ್ನದೇ ವೇದಿಕೆ ನೀಡುತ್ತದೆ. ಪ್ರತಿ ಯೋಜನೆಯನ್ನು ಅದು ಆಯ್ಕೆಮಾಡಿದ ಮಾಧ್ಯಮದೊಳಗೆ ಆ ನಿರ್ದಿಷ್ಟ ಕ್ಷೇತ್ರದ ತಜ್ಞರು ಮೌಲ್ಯಮಾಪನ ಮಾಡುತ್ತಾರೆ.
ಸ್ಪರ್ಧಾಕೃತಿಗಳನ್ನು ಒಂದಕ್ಕಿಂತ ಹೆಚ್ಚು ಮಾಧ್ಯಮ ವಿಭಾಗಗಳಲ್ಲಿ ಸಲ್ಲಿಸಬಹುದು. ಆದರೆ ಪ್ರತಿ ವಿಭಾಗಕ್ಕೂ ಪ್ರತ್ಯೇಕವಾಗಿ ಸಲ್ಲಿಸಿ, ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕು (2026ರ ಅಕ್ಟೋಬರ್ 27ಕ್ಕೂ ಮೊದಲು ಸಲ್ಲಿಸಿದ ಸ್ಪರ್ಧಾಕೃತಿಗಳಿಗೆ ದೊರೆಯುವ ಒಂದು ಹೆಚ್ಚುವರಿ ಉಚಿತ ಸ್ಪರ್ಧಾಕೃತಿ ಮಾತ್ರ ಇದಕ್ಕೆ ಅಪವಾದ). ಬಯಸಿದರೆ ಪ್ರತಿ ಸ್ಪರ್ಧಾಕೃತಿಯನ್ನೂ ವಿದ್ಯಾರ್ಥಿ ಯೋಜನೆ ಅಥವಾ ವೃತ್ತಿ ತರಬೇತಿ ಯೋಜನೆ ಎಂದು ಗುರುತಿಸಬಹುದು.
1 – ಸಂಪಾದಕೀಯ ವಿನ್ಯಾಸ ಮತ್ತು ಪ್ರಕಾಶನ
ಮುದ್ರಿತ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ವಿಷಯ ಮತ್ತು ಅಕ್ಷರ ಸಂಯೋಜನೆಯನ್ನು ಒಗ್ಗೂಡಿಸಿ ಆಕರ್ಷಕ ಓದಿನ ಅನುಭವಗಳನ್ನು ನೀಡುವ ಅತ್ಯುತ್ತಮ ಸಂಪಾದಕೀಯ ವಿನ್ಯಾಸ ಕೃತಿಗಳು.
ಅರ್ಹ ಸ್ವರೂಪಗಳು:
ಪುಸ್ತಕ ವಿನ್ಯಾಸ (ಉದಾ. ಕಥಾಸಾಹಿತ್ಯ, ವಾಸ್ತವಾಧಾರಿತ ಸಾಹಿತ್ಯ, ಕಲಾ ಪುಸ್ತಕಗಳು, ಕ್ಯಾಟಲಾಗ್ಗಳು)
ನಿಯತಕಾಲಿಕೆ ಮತ್ತು ಪತ್ರಿಕೆ ವಿನ್ಯಾಸ (ಮುದ್ರಿತ ಅಥವಾ ಡಿಜಿಟಲ್)
ಅಕ್ಷರ ಸಂಯೋಜನೆಯ ಸಂಪಾದಕೀಯ ಸರಣಿಗಳು (ಅಂಕಣಗಳು, ಸಾಹಿತ್ಯ ಸರಣಿಗಳು, ಧಾರಾವಾಹಿ ಪ್ರಬಂಧಗಳು)
ಸ್ವತಂತ್ರ ಪ್ರಕಾಶನ (ಕಿರುಪತ್ರಿಕೆಗಳು, ಸ್ವಯಂ ಪ್ರಕಟಿತ ಪುಸ್ತಕಗಳು, ಸುದ್ದಿಪತ್ರಗಳು, ಪ್ರಾಯೋಗಿಕ ಸ್ವರೂಪಗಳು)
2 – ಪೋಸ್ಟರ್ಗಳು (ಮುದ್ರಿತ ಮತ್ತು ಡಿಜಿಟಲ್)
ಸ್ಪಷ್ಟವಾದ ಸಂದೇಶ, ಅಕ್ಷರ ಸಂಯೋಜನೆಯ ಸ್ಪಷ್ಟತೆ ಮತ್ತು ದೃಶ್ಯ ಪರಿಣಾಮಕ್ಕೆ ಒತ್ತು ನೀಡುವ, ಸಾಂಸ್ಕೃತಿಕ, ವಾಣಿಜ್ಯ ಅಥವಾ ಸಾಮಾಜಿಕ ಸನ್ನಿವೇಶಗಳ ಅತ್ಯುತ್ತಮ ಪೋಸ್ಟರ್ ವಿನ್ಯಾಸ.
ಅರ್ಹ ಸ್ವರೂಪಗಳು:
ಏಕ ಪೋಸ್ಟರ್ಗಳು
ಪೋಸ್ಟರ್ ಸರಣಿಗಳು
ದೊಡ್ಡ ಗಾತ್ರದ ಪೋಸ್ಟರ್ಗಳು (ಉದಾ. 18/1 ಜಾಹೀರಾತು ಫಲಕಗಳು, ನಗರ ಹೊರಾಂಗಣ ಸ್ವರೂಪಗಳು)
ಡಿಜಿಟಲ್ ಪೋಸ್ಟರ್ಗಳು (ಸಾರ್ವಜನಿಕ ಅಥವಾ ವಾಣಿಜ್ಯ ಸ್ಥಳಗಳ ಪರದೆಗಳಲ್ಲಿನ ಪ್ರದರ್ಶನಗಳು)
3 – ಪ್ಯಾಕೇಜಿಂಗ್ ವಿನ್ಯಾಸ
ಬ್ರ್ಯಾಂಡ್ ಗುರುತನ್ನು ಬಲಪಡಿಸಿ ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ನವೀನ, ಉಪಯುಕ್ತ ಪ್ಯಾಕೇಜಿಂಗ್. ಅಕ್ಷರ ಸಂಯೋಜನೆಯ ಸೂಕ್ಷ್ಮತೆ ಮತ್ತು ಆಕಾರದ ಮೂಲಕ ದೃಶ್ಯ ಕಥನಕ್ಕೆ ವಿಶೇಷ ಒತ್ತು.
ಅರ್ಹ ಸ್ವರೂಪಗಳು:
ಒಂದೇ ಉತ್ಪನ್ನದ ಪ್ಯಾಕೇಜಿಂಗ್
ಉತ್ಪನ್ನ ಶ್ರೇಣಿಗಳು ಮತ್ತು ಸರಣಿಗಳು
ಅಕ್ಷರ ಸಂಯೋಜನೆ ಆಧಾರಿತ ಪ್ಯಾಕೇಜಿಂಗ್ (ಅಕ್ಷರರೂಪವೇ ಮುಖ್ಯ ದೃಶ್ಯ ಅಂಶವಾಗಿರುವ ವಿನ್ಯಾಸಗಳು)
4 – ಡಿಜಿಟಲ್ ಮಾಧ್ಯಮ ಮತ್ತು ಇಂಟರ್ಫೇಸ್ ವಿನ್ಯಾಸ
ಡಿಜಿಟಲ್ ವಲಯದಲ್ಲಿ ಸಂವಾದಾತ್ಮಕತೆ ಮತ್ತು ಅಕ್ಷರ ಸಂಯೋಜನೆಯ ಉತ್ಕೃಷ್ಟತೆಯನ್ನು ಮುಂದಕ್ಕೆ ಕೊಂಡೊಯ್ಯುವ ಸೃಜನಶೀಲ ಪರದೆ ಆಧಾರಿತ ವಿನ್ಯಾಸ ಪರಿಹಾರಗಳು.
ಅರ್ಹ ಸ್ವರೂಪಗಳು:
ವೆಬ್ಸೈಟ್ಗಳು ಮತ್ತು ಬಳಕೆದಾರ ಇಂಟರ್ಫೇಸ್ಗಳು
ಮೊಬೈಲ್ ಅಪ್ಲಿಕೇಶನ್ಗಳು
ಡಿಜಿಟಲ್ ಪ್ರಕಟಣೆಗಳು / ಇ-ಪುಸ್ತಕಗಳು / ಸಂವಾದಾತ್ಮಕ ಪುಸ್ತಕಗಳು
ಕಿರು ವೆಬ್ಸೈಟ್ಗಳು ಅಥವಾ ಡಿಜಿಟಲ್ ಕಥನ ವೇದಿಕೆಗಳು
5 – ಮೋಷನ್ ಗ್ರಾಫಿಕ್ಸ್ ಮತ್ತು ಅನಿಮೇಷನ್
ಕಥೆಗಳನ್ನು ಹೇಳಲು, ವಿಚಾರಗಳನ್ನು ವ್ಯಕ್ತಪಡಿಸಲು ಅಥವಾ ಗಮನವನ್ನು ನಿರ್ದೇಶಿಸಲು ಅಕ್ಷರ ಸಂಯೋಜನೆ ಮತ್ತು ದೃಶ್ಯ ಚಲನೆಯನ್ನು ಬಳಸುವ ಕಾಲಾಧಾರಿತ ವಿನ್ಯಾಸ ಕೃತಿಗಳು.
ಅರ್ಹ ಸ್ವರೂಪಗಳು:
ಅಕ್ಷರ ಸಂಯೋಜನೆಯ ಅನಿಮೇಷನ್ಗಳು
ಶೀರ್ಷಿಕೆ ದೃಶ್ಯ ಸರಣಿಗಳು
ಅಭಿಯಾನಗಳು, ಸಂಗೀತ, ಶಿಕ್ಷಣ ಅಥವಾ ಬ್ರ್ಯಾಂಡಿಂಗ್ಗಾಗಿ ಮೋಷನ್ ಗ್ರಾಫಿಕ್ಸ್
ಚಲಿಸುವ ಅಕ್ಷರರೂಪಗಳ ಪ್ರಯೋಗಗಳು
ವೇರಿಯಬಲ್ ಫಾಂಟ್ಗಳನ್ನು ವಿಶಿಷ್ಟವಾಗಿ ಬಳಸುವ ಅನ್ವಯಗಳು (ಉದಾ. ಬದಲಾಗುವ ಅಕ್ಷರ ದಪ್ಪ, ಅಗಲ ಅಥವಾ ಆಪ್ಟಿಕಲ್ ಗಾತ್ರ)
6 – ಸ್ಥಳ ಮತ್ತು ಅನುಭವ ವಿನ್ಯಾಸ
ಭೌತಿಕ ಅಥವಾ ಸಂಯೋಜಿತ ಪರಿಸರದಲ್ಲಿ ಅನುಭವಗಳನ್ನು ರೂಪಿಸಲು ಅಕ್ಷರರೂಪ, ಚಿತ್ರ ಮತ್ತು ರಚನೆಯನ್ನು ಬಳಸುವ ಸ್ಥಳಾಧಾರಿತ ಸಂವಹನ ಯೋಜನೆಗಳು.
ಅರ್ಹ ಸ್ವರೂಪಗಳು:
ಪ್ರದರ್ಶನ ಮತ್ತು ಮೇಳ ವಿನ್ಯಾಸ
ಮಾರ್ಗದರ್ಶನ ವ್ಯವಸ್ಥೆಗಳು ಮತ್ತು ಸೂಚನಾಫಲಕಗಳು
ಸ್ಥಳಾಧಾರಿತ ಅಕ್ಷರ ಸಂಯೋಜನೆ (ಕಲಾ ಸ್ಥಾಪನೆಗಳು, ವಾಸ್ತುಶಿಲ್ಪದಲ್ಲಿ ಅಕ್ಷರರೂಪ, ಡಿಜಿಟಲ್-ಭೌತಿಕ ಸಂಯೋಜನೆಗಳು)
7 – ಅಭಿಯಾನಗಳು
ಪ್ರಬಲ ಅಕ್ಷರ ಸಂಯೋಜನೆ ಮತ್ತು ದೃಶ್ಯ ಕಥನದೊಂದಿಗೆ ಒಂದು ಅಥವಾ ಹಲವು ಮಾಧ್ಯಮಗಳಾದ್ಯಂತ ಅನುಸರಿಸುವ ಸಮಗ್ರ ಸಂವಹನ ತಂತ್ರಗಳು.
ಅರ್ಹ ಸ್ವರೂಪಗಳು:
ಮುದ್ರಿತ ಅಭಿಯಾನಗಳು (ಸಂಪಾದಕೀಯ, ಜಾಹೀರಾತು, ಸಾರ್ವಜನಿಕ ಸಂವಹನ)
ಬಹುಮಾಧ್ಯಮ ಅಭಿಯಾನಗಳು (ಮುದ್ರಿತ, ಡಿಜಿಟಲ್, ಭೌತಿಕ)
ಸಾರ್ವಜನಿಕ ಹಿತದ ಸಂವಹನ (ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ)
8 – ದೃಶ್ಯ ಗುರುತು ಮತ್ತು ಬ್ರ್ಯಾಂಡಿಂಗ್
ಅಕ್ಷರ ಸಂಯೋಜನೆ ಮತ್ತು ದೃಶ್ಯ ಭಾಷೆಯ ಮೂಲಕ ಸ್ವರೂಪ, ಮೌಲ್ಯಗಳು ಮತ್ತು ಸಂದರ್ಭವನ್ನು ವ್ಯಕ್ತಪಡಿಸುವ ಸುಸಂಗತ ಬ್ರ್ಯಾಂಡ್ ಗುರುತುಗಳ ವಿನ್ಯಾಸ.
ಅರ್ಹ ಸ್ವರೂಪಗಳು:
ಸಾಂಸ್ಥಿಕ ವಿನ್ಯಾಸ ವ್ಯವಸ್ಥೆಗಳು / ದೃಶ್ಯ ಗುರುತುಗಳು
ಲಾಂಛನ ವಿನ್ಯಾಸ
ಅಕ್ಷರರೂಪ ಕೇಂದ್ರಿತ ಬ್ರ್ಯಾಂಡಿಂಗ್ (ಮುಖ್ಯವಾಗಿ ಅಕ್ಷರರೂಪದ ಮೇಲೆ ಆಧಾರಿತ ಗುರುತುಗಳು)
9 – ಪ್ರಾಯೋಗಿಕ, ಅಪ್ರಕಟಿತ ಮತ್ತು ಸುಲೇಖನ ಕೃತಿಗಳು
ಅಕ್ಷರ ಸಂಯೋಜನೆಯ ಹೊಸ ವಿಧಾನಗಳು, ಸಾಧನಗಳು ಮತ್ತು ಸಾಂಸ್ಕೃತಿಕ ಕಥನಗಳನ್ನು ಅನ್ವೇಷಿಸುವ ಸ್ವತಂತ್ರ ಹಾಗೂ ಸಾಧ್ಯತೆಗಳನ್ನು ಪರೀಕ್ಷಿಸುವ ಕೃತಿಗಳಿಗೆ ಒಂದು ನೆಲೆ – ವಿಶೇಷವಾಗಿ ಲ್ಯಾಟಿನ್ ಹೊರತಾದ ಲಿಪಿಗಳ ಸನ್ನಿವೇಶಗಳಲ್ಲಿ. ಅರ್ಹ ಸ್ವರೂಪಗಳು:
ಸ್ವಯಂ ಪ್ರೇರಿತ ಯೋಜನೆಗಳು
ಸಂಶೋಧನಾಧಾರಿತ ಅಥವಾ ಪರಿಕಲ್ಪನಾತ್ಮಕ ಮಾದರಿಗಳು
ಆರಂಭಿಕ ಹಂತದ ಪರಿಕಲ್ಪನೆಗಳು / ಪ್ರಗತಿಯಲ್ಲಿರುವ ಕೃತಿಗಳು
ಸುಲೇಖನ ಕೃತಿಗಳು ಮತ್ತು ಅನ್ವೇಷಣೆಗಳು
ಇನ್ನೂ ಪ್ರಕಟವಾಗದ ಅಥವಾ ಸಾಕಾರಗೊಳ್ಳದ ಕೃತಿಗಳು
ಅನ್ವೇಷಣಾತ್ಮಕ ಅಕ್ಷರ ಸಂಯೋಜನೆ
ಮೌಲ್ಯಮಾಪನದ ಮಾನದಂಡಗಳು
GRANSHAN Bloom Awardಗೆ ಸಲ್ಲಿಸುವ ಪ್ರತಿ ಸ್ಪರ್ಧಾಕೃತಿಯನ್ನೂ ದಿಟ್ಟ ವಿಚಾರಗಳು ಮತ್ತು ದೋಷರಹಿತ ಕಾರ್ಯರೂಪ ಎರಡಕ್ಕೂ ಮೌಲ್ಯ ನೀಡುವ ತಜ್ಞರು ಕಾಳಜಿ ಮತ್ತು ಕುತೂಹಲದಿಂದ ಪರಿಶೀಲಿಸಿ ತೀರ್ಪು ನೀಡುತ್ತಾರೆ. ನಮ್ಮ ಮಾನದಂಡಗಳು ಪರಿಕಲ್ಪನೆ, ಕೌಶಲ ಮತ್ತು ಸಾಂಸ್ಕೃತಿಕ ಪ್ರಸ್ತುತತೆಯ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತವೆ. ಅತ್ಯುತ್ತಮ ಕೃತಿಯ ಎಲ್ಲ ಆಯಾಮಗಳಿಗೂ ಮನ್ನಣೆ ದೊರೆಯುವಂತೆ ಮಾಡುತ್ತವೆ.
ಪರಿಕಲ್ಪನೆ ಮತ್ತು ನಾವೀನ್ಯತೆ – ಅಚ್ಚರಿ ಮೂಡಿಸುವ, ಪ್ರೇರೇಪಿಸುವ ಮತ್ತು ವಿನ್ಯಾಸ ಕ್ಷೇತ್ರವನ್ನು ಮುಂದಕ್ಕೆ ಕೊಂಡೊಯ್ಯುವ ವಿಚಾರಗಳು.
ಸಂವಹನ ಮತ್ತು ಸ್ಪಷ್ಟತೆ – ನಿಖರತೆ ಮತ್ತು ಉದ್ದೇಶದೊಂದಿಗೆ ಮಾತನಾಡುವ ವಿನ್ಯಾಸ.
ದೃಶ್ಯ ಮತ್ತು ಸೌಂದರ್ಯಾತ್ಮಕ ಗುಣಮಟ್ಟ – ಸೌಂದರ್ಯ, ಸಮತೋಲನ ಮತ್ತು ಸೂಕ್ಷ್ಮತೆಗಳ ಪರಿಪೂರ್ಣ ಸಾಮರಸ್ಯ.
ಅಕ್ಷರ ಸಂಯೋಜನೆಯ ಉತ್ಕೃಷ್ಟತೆ – ಅಕ್ಷರರೂಪಗಳು ಮತ್ತು ಅವುಗಳಿಗೆ ಸಂಬಂಧಿಸಿದ ಲಿಪಿಗಳ ಮೇಲಿನ ಪಾಂಡಿತ್ಯ.
ಕೌಶಲ್ಯ ಮತ್ತು ಅನುಷ್ಠಾನ – ಪ್ರತಿ ಅಂಶವನ್ನೂ ಉದ್ದೇಶಪೂರ್ವಕವಾಗಿ ಇರಿಸಿರುವ ದೋಷರಹಿತ ಅಂತಿಮ ರೂಪ.
ಬಳಕೆಯ ಸುಲಭತೆ ಮತ್ತು ಕಾರ್ಯಸಾಮರ್ಥ್ಯ – ರೂಪ ಮತ್ತು ಕಾರ್ಯ ಎರಡರಲ್ಲೂ ಸುಗಮವಾಗಿ ಕೆಲಸ ಮಾಡುವುದು.
ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಸ್ತುತತೆ – ತನ್ನ ಕಾಲ, ಸ್ಥಳ ಮತ್ತು ಪ್ರೇಕ್ಷಕರೊಂದಿಗೆ ಸ್ಪಂದಿಸುವ ವಿನ್ಯಾಸ.
ಎಲ್ಲ ಮಾನದಂಡಗಳೂ ಮುಖ್ಯವಾದರೂ, ಮೂರಕ್ಕೆ ನಮ್ಮ ಧ್ಯೇಯದ ಕೇಂದ್ರ ಸ್ಥಾನವಿದೆ. ತೀರ್ಪುಗಾರರ ಮಂಡಳಿಯ ಮೌಲ್ಯಮಾಪನದಲ್ಲಿ ಇವುಗಳಲ್ಲಿ ಪ್ರತಿಯೊಂದಕ್ಕೂ ದುಪ್ಪಟ್ಟು ತೂಕ ನೀಡಲಾಗುತ್ತದೆ: ಪರಿಕಲ್ಪನೆ ಮತ್ತು ನಾವೀನ್ಯತೆ, ಅಕ್ಷರ ಸಂಯೋಜನೆಯ ಉತ್ಕೃಷ್ಟತೆ, ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಸ್ತುತತೆ. ಇವು ಒಟ್ಟಾಗಿ GRANSHAN Bloom Awardನ ಚೈತನ್ಯಮಯ ತ್ರಯವನ್ನು ರೂಪಿಸುತ್ತವೆ: ದಿಟ್ಟ ವಿಚಾರದ ಕಿಡಿ, ಪ್ರತಿ ವಕ್ರರೇಖೆ ಮತ್ತು ಅಕ್ಷರದ ಒಳಗಿನ ಖಾಲಿ ಜಾಗದಲ್ಲೂ ಲಿಪಿಯ ಮೇಲಿನ ಪಾಂಡಿತ್ಯ, ಮತ್ತು ತನ್ನ ಸಾಂಸ್ಕೃತಿಕ ನೆಲೆಯಲ್ಲಿ ಬೇರೂರಿದ ವಿನ್ಯಾಸದ ಆಳವಾದ ಸ್ಪಂದನ. ಇಲ್ಲಿ ದೂರದೃಷ್ಟಿಯು ಕೌಶಲದೊಂದಿಗೆ ಸೇರುತ್ತದೆ. ಅವೆರಡೂ ತಾವು ಸೇವೆ ಸಲ್ಲಿಸುವ ಕಥೆಗಳು, ಸಂಕೇತಗಳು ಮತ್ತು ಸಮುದಾಯಗಳಲ್ಲಿ ತಮ್ಮ ನಿಜವಾದ ಅರ್ಥವನ್ನು ಕಂಡುಕೊಳ್ಳುತ್ತವೆ.
ತೀರ್ಪುಗಾರರ ಮಂಡಳಿ
ಪ್ರತಿ ಸಲ್ಲಿಕೆಯನ್ನೂ ಅದರ ಅಕ್ಷರ ಸಂಯೋಜನೆ, ಸಂಸ್ಕೃತಿ ಮತ್ತು ವಿನ್ಯಾಸದ ಸಂಪೂರ್ಣ ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುವಂತೆ, GRANSHAN Bloom Awardನ ತೀರ್ಪುಗಾರರ ಮಂಡಳಿಯು ಆಳವಾದ ಸಾಂಸ್ಕೃತಿಕ ಪರಿಣತಿ ಮತ್ತು ವ್ಯಾಪಕ ವೃತ್ತಿಪರ ಒಳನೋಟವನ್ನು ಒಟ್ಟುಗೂಡಿಸುತ್ತದೆ.
ಲಿಪಿ ಗುಂಪುಗಳ ಅಧ್ಯಕ್ಷರು
ಪ್ರತಿ ಲಿಪಿ ಗುಂಪನ್ನು ಆಯಾ ಲಿಪಿಯಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದ, ಬಹುಮಾನ್ಯ ವ್ಯಕ್ತಿಯಾದ ಲಿಪಿ ಗುಂಪಿನ ಅಧ್ಯಕ್ಷರು ಮುನ್ನಡೆಸುತ್ತಾರೆ. ವಿವಿಧ ಮಾಧ್ಯಮಗಳ ಸಮಗ್ರ ಅರಿವಿನೊಂದಿಗೆ ಕಾರ್ಯನಿರ್ವಹಿಸುವ ಲಿಪಿ ಗುಂಪಿನ ಅಧ್ಯಕ್ಷರು, ಪ್ರತಿ ಸಲ್ಲಿಕೆಯನ್ನು ಸಾಂಸ್ಕೃತಿಕ ನಿಖರತೆ ಮತ್ತು ಅಕ್ಷರ ಸಂಯೋಜನೆಯ ತಿಳಿವಳಿಕೆಯೊಂದಿಗೆ ಪರಿಶೀಲಿಸುವುದನ್ನು ಖಚಿತಪಡಿಸುತ್ತಾರೆ.
ಮಾಧ್ಯಮ ತಜ್ಞರು
ಲಿಪಿ ಗುಂಪಿನ ಅಧ್ಯಕ್ಷರ ಜೊತೆಗೆ, ಪ್ರತಿ ಲಿಪಿ ಗುಂಪಿನಲ್ಲಿ ನಮ್ಮ ಒಂಬತ್ತು ಮಾಧ್ಯಮ ವಿಭಾಗಗಳ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳುವ ಕೌಶಲವಿರುವ 3 – 5 ಮಾಧ್ಯಮ ತಜ್ಞರಿರುತ್ತಾರೆ. ಸ್ಪಷ್ಟತೆಗಾಗಿ ಈ ವಿಭಾಗಗಳನ್ನು ನಾಲ್ಕು ಪರಿಣತಿ ಸಮೂಹಗಳಾಗಿ ವಿಂಗಡಿಸಲಾಗಿದೆ:
ಸಂಪಾದಕೀಯ ವಿನ್ಯಾಸ ಮತ್ತು ಪ್ರಕಾಶನ, ಪೋಸ್ಟರ್ಗಳು, ಪ್ಯಾಕೇಜಿಂಗ್ ವಿನ್ಯಾಸ
ಡಿಜಿಟಲ್ ಮಾಧ್ಯಮ ಮತ್ತು ಇಂಟರ್ಫೇಸ್ ವಿನ್ಯಾಸ, ಮೋಷನ್ ಗ್ರಾಫಿಕ್ಸ್ ಮತ್ತು ಅನಿಮೇಷನ್
ಸ್ಥಳ ಮತ್ತು ಅನುಭವ ವಿನ್ಯಾಸ, ಪ್ರಾಯೋಗಿಕ, ಅಪ್ರಕಟಿತ ಮತ್ತು ಸುಲೇಖನ ಕೃತಿಗಳು
ಅಭಿಯಾನಗಳು, ದೃಶ್ಯ ಗುರುತು ಮತ್ತು ಬ್ರ್ಯಾಂಡಿಂಗ್
ಪ್ರತಿ ಲಿಪಿ ಗುಂಪಿನ ತೀರ್ಪುಗಾರರ ಮಂಡಳಿಯಲ್ಲಿ ಪ್ರತಿಯೊಂದು ಪರಿಣತಿ ಸಮೂಹಕ್ಕೂ ಪ್ರಾತಿನಿಧ್ಯವಿರುತ್ತದೆ. ಹೀಗಾಗಿ ಪ್ರತಿ ಯೋಜನೆಯನ್ನೂ ಸಂಬಂಧಿತ ಮಾಧ್ಯಮದಲ್ಲಿ ಪರಿಣತಿ ಇರುವವರೂ ಅದರ ಲಿಪಿಯ ತಜ್ಞರೂ ಪರಿಶೀಲಿಸುತ್ತಾರೆ.
ಲಿಪಿಯ ಮೇಲಿನ ಪಾಂಡಿತ್ಯ ಮತ್ತು ಮಾಧ್ಯಮದ ಜ್ಞಾನ ಎಂಬ ಈ ಎರಡು ಅಂಶಗಳ ಮೇಲಿನ ಗಮನವು ನಿಮ್ಮ ಕೃತಿಗೆ ತಕ್ಕ ನಿಖರತೆ, ನ್ಯಾಯಸಮ್ಮತತೆ ಮತ್ತು ಆಳದೊಂದಿಗೆ ಮೌಲ್ಯಮಾಪನ ನಡೆಯುವುದನ್ನು ಖಚಿತಪಡಿಸುತ್ತದೆ.
50 Best of the Best Jury
ಅಂತಿಮ ಹಂತದಲ್ಲಿ ಎಲ್ಲ Bloom Award ವಿಜೇತರ ಕೃತಿಗಳನ್ನು 50 Best of the Best Jury ಪರಿಗಣಿಸಿ, ಗರಿಷ್ಠ 50 Best of the Best ಕೃತಿಗಳನ್ನು ಆಯ್ಕೆಮಾಡುತ್ತದೆ. ಈ ಮಂಡಳಿಯಲ್ಲಿ ಜಾಗತಿಕ ವಿನ್ಯಾಸ ಕ್ಷೇತ್ರದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೆಲವರು ಒಟ್ಟುಗೂಡುತ್ತಾರೆ – ಪಾಶ್ಚಾತ್ಯ ಪರಂಪರೆಯ ದೃಷ್ಟಿಕೋನಗಳೊಂದಿಗೆ ಲ್ಯಾಟಿನ್ ಹೊರತಾದ ಜಗತ್ತಿನ ಪ್ರಮುಖ ವ್ಯಕ್ತಿಗಳ ದೃಷ್ಟಿಕೋನಗಳೂ ಸೇರುತ್ತವೆ. ಈ ಸಂಯೋಜನೆ ಉದ್ದೇಶಪೂರ್ವಕವಾಗಿದೆ: ಲ್ಯಾಟಿನ್ ವರ್ಣಮಾಲೆಯ ಹೊರತಾದ ಜಗತ್ತಿನ ಲಿಪಿಗಳ ಮೇಲೆ ಗಾಢವಾದ ಗಮನವನ್ನು ಉಳಿಸಿಕೊಂಡು, ಅವುಗಳ ಜಾಗತಿಕ ಸಾಂಸ್ಕೃತಿಕ ಮಹತ್ವವನ್ನು ಒತ್ತಿಹೇಳುತ್ತಾ, ಸಂವಹನ ವಿನ್ಯಾಸದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳುವುದು ಇದರ ಉದ್ದೇಶ. ತಮ್ಮ ಭಾಗವಹಿಸುವಿಕೆಯನ್ನು ಈಗಾಗಲೇ ದೃಢಪಡಿಸಿದವರಲ್ಲಿ Stefan Sagmeister ಕೂಡ ಇದ್ದಾರೆ.
ತೀರ್ಪುಗಾರರ ಮಂಡಳಿಯ ಸದಸ್ಯರನ್ನು ಹಂತಹಂತವಾಗಿ ಘೋಷಿಸಲಾಗುತ್ತದೆ. ಮೊದಲ ಹೆಸರುಗಳನ್ನು 2026ರ ಆರಂಭದಲ್ಲಿ ಬಹಿರಂಗಪಡಿಸಲಾಗುತ್ತದೆ.
ತೀರ್ಪು ಪ್ರಕ್ರಿಯೆ ಮತ್ತು ಪುರಸ್ಕಾರಗಳು
GRANSHAN Bloom Award ಮೂರು ಹಂತಗಳ ತೀರ್ಪು ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಪ್ರತಿ ಹಂತದಲ್ಲೂ ಶ್ರೇಷ್ಠತೆಯನ್ನು ಗುರುತಿಸಲು ಮತ್ತು ಪ್ರತಿ ವಿಜೇತ ಯೋಜನೆಗೂ ಅರ್ಥಪೂರ್ಣವಾದ, ಎಲ್ಲರ ಗಮನಕ್ಕೆ ಬರುವ ಮನ್ನಣೆ ದೊರೆಯುವಂತೆ ಇದನ್ನು ರೂಪಿಸಲಾಗಿದೆ.
ಎಲ್ಲ ಸ್ಪರ್ಧಾಕೃತಿಗಳನ್ನೂ ಭಾಗವಹಿಸುವವರ ಗುರುತು ಮರೆಮಾಡಿದ ರೂಪದಲ್ಲಿ ತೀರ್ಪುಗಾರರ ಮಂಡಳಿಗೆ ಪ್ರಸ್ತುತಪಡಿಸಲಾಗುತ್ತದೆ. ಪ್ರತಿ ಯೋಜನೆಯೊಂದಿಗೆ ಸಲ್ಲಿಕೆ ನಮೂನೆಯ ವಿವರಣಾತ್ಮಕ ಪಠ್ಯಗಳು (ಗುರುತು ತಿಳಿಸುವ ಯಾವುದೇ ವಿವರಗಳಿಲ್ಲದೆ) ಮತ್ತು ಲಭ್ಯವಿರುವಲ್ಲಿ ಅನಿಮೇಷನ್ ಅಥವಾ ಚಲನೆ ಆಧಾರಿತ ಪ್ರಸ್ತುತಿಗಳೂ ಇರುತ್ತವೆ. ಇದರಿಂದ ತೀರ್ಪುಗಾರರು ವಿನ್ಯಾಸದ ದೃಶ್ಯ ಗುಣಮಟ್ಟವಷ್ಟೇ ಅಲ್ಲದೆ, ಅದು ಉದ್ದೇಶಿತ ಚಲನಶೀಲ ಸನ್ನಿವೇಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನೂ ಮೌಲ್ಯಮಾಪನ ಮಾಡಬಹುದು.
ನೀವು ಏನನ್ನು ಗೆಲ್ಲಬಹುದು
ಪ್ರತಿ ವಿಜೇತ ಕೃತಿಗೂ Bloom Award ದೊರೆಯುತ್ತದೆ – ಇದು GRANSHAN Bloom Awardನ ವಿಶಿಷ್ಟ ಗುರುತು. ಎಲ್ಲ ಪುರಸ್ಕಾರಗಳ ಸ್ಥಾನಮಾನವೂ ಸಮಾನ; ಚಿನ್ನ, ಬೆಳ್ಳಿ ಅಥವಾ ಕಂಚಿನ ಶ್ರೇಣಿಗಳಿಲ್ಲ.
ಈ ವಿಜೇತರ ಪೈಕಿ 50 Best of the Best Jury ಗರಿಷ್ಠ 50 Best of the Best ಕೃತಿಗಳನ್ನು ಆಯ್ಕೆಮಾಡುತ್ತದೆ – ಇದು ಸ್ಪರ್ಧೆಯ ಅತ್ಯುನ್ನತ ಗೌರವ.
ಇದರ ಜೊತೆಗೆ, ಪಾಲುದಾರ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಸಹಯೋಗದಲ್ಲಿ ಹಲವು ವಿಶೇಷ ಪುರಸ್ಕಾರಗಳನ್ನು ನೀಡಲು ನಾವು ಯೋಜಿಸಿದ್ದೇವೆ. ಉದಾಹರಣೆಗೆ, ಪ್ರಾಯೋಗಿಕ ಸಾಧನಗಳು ಮತ್ತು ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸುವ, ಅಕ್ಷರ ಸಂಯೋಜನೆಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಆಳವಾಗಿ ತೊಡಗಿಸಿಕೊಳ್ಳುವ ಅಥವಾ ಸಾಮಾಜಿಕ ಪರಿಣಾಮ ಉಂಟುಮಾಡುವ ವಿನ್ಯಾಸದ ಸಾಮರ್ಥ್ಯವನ್ನು ತೋರಿಸುವ ಯೋಜನೆಗಳನ್ನು ಇವು ಗುರುತಿಸಬಹುದು. ಪಾಲುದಾರಿಕೆಗಳು ದೃಢಪಟ್ಟ ನಂತರ ನಿರ್ದಿಷ್ಟ ವಿಶೇಷ ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ.
Supporting Foundries’ Choice Award
ಮುಖ್ಯ ತೀರ್ಪುಗಾರರ ಮಂಡಳಿ ನೀಡುವ ಪುರಸ್ಕಾರಗಳ ಜೊತೆಗೆ, ನಮ್ಮ ಪ್ರತಿ ಬೆಂಬಲಿಗ ಅಕ್ಷರಶೈಲಿ ಸಂಸ್ಥೆಯೂ ವಿಶೇಷ ಮನ್ನಣೆಯನ್ನು ನೀಡಬಹುದು: Foundry’s Choice. ಅಧಿಕೃತ ತೀರ್ಪುಗಳು ಹೊರಬಂದ ನಂತರ, ಪ್ರತಿ ಅಕ್ಷರಶೈಲಿ ಸಂಸ್ಥೆಯೂ ತನ್ನ ಅಕ್ಷರಶೈಲಿಗಳನ್ನು ವಿಶೇಷ ಸೃಜನಶೀಲತೆ ಮತ್ತು ಪರಿಣಾಮದೊಂದಿಗೆ ಬಳಸಿರುವ ಪುರಸ್ಕೃತ ಯೋಜನೆಗಳಲ್ಲಿ ಒಂದನ್ನು ಆಯ್ಕೆಮಾಡಬಹುದು.
ಈ ಯೋಜನೆಗಳಿಗೆ ಎರಡು ಬಾರಿ ವಿಶೇಷ ಗಮನ ಸಿಗುತ್ತದೆ – ಮೊದಲು ಅಕ್ಷರಶೈಲಿ ಸಂಸ್ಥೆಯ ಸ್ವಂತ ಮಾಧ್ಯಮಗಳಲ್ಲಿ, ನಂತರ GRANSHANನ ಜಾಗತಿಕ ವೇದಿಕೆಗಳಲ್ಲಿ. ಇದರಿಂದ ಆಯ್ಕೆಯಾದ ಕೃತಿಗಳಿಗೆ ಅಂತರರಾಷ್ಟ್ರೀಯ ವಿನ್ಯಾಸ ಸಮುದಾಯದಲ್ಲಿ ಇನ್ನಷ್ಟು ಗಮನ, ವಿಶ್ವಾಸಾರ್ಹತೆ ಮತ್ತು ಪ್ರಚಾರ ದೊರೆಯುತ್ತದೆ.
ಭಾಗವಹಿಸುವವರಿಗೆ ಇದು ಗೆಲ್ಲಲು ಮತ್ತೊಂದು ಅವಕಾಶ: Bloom Awardನ Bloom Award ಜೊತೆಗೆ, ಜಾಗತಿಕವಾಗಿ ಕಾರ್ಯನಿರ್ವಹಿಸುವ ಪ್ರಮುಖ ಅಕ್ಷರಶೈಲಿ ಸಂಸ್ಥೆಯು ನಿಮ್ಮ ಯೋಜನೆಯನ್ನು ತನ್ನ ವಿಶೇಷ ಆಯ್ಕೆಯಾಗಿ ಆರಿಸಬಹುದು – ಇಂದಿನ ಅತ್ಯಂತ ಪ್ರಭಾವಶಾಲಿ ಸ್ವತಂತ್ರ ಫಾಂಟ್ ಪ್ರಕಾಶಕರಲ್ಲಿ ಕೆಲವರೊಂದಿಗೆ ನಿಮ್ಮ ಕೃತಿಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ತೀರ್ಪು ಪ್ರಕ್ರಿಯೆಯ ಮೂರು ಹಂತಗಳು
ಹಂತ 1 – ತಜ್ಞ ತೀರ್ಪುಗಾರರ ಮಂಡಳಿಯ ಮೌಲ್ಯಮಾಪನ
ಈ ಮೌಲ್ಯಮಾಪನದಲ್ಲಿ, ನಿರ್ದಿಷ್ಟ ಮಾಧ್ಯಮ ವಿಭಾಗಗಳು ಮತ್ತು ಲಿಪಿ ಗುಂಪುಗಳಲ್ಲಿ ಪರಿಣತಿ ಹೊಂದಿರುವ 100ಕ್ಕೂ ಹೆಚ್ಚು ತೀರ್ಪುಗಾರರು ಎಲ್ಲ ಸಲ್ಲಿಕೆಗಳನ್ನು ಪರಿಶೀಲಿಸುತ್ತಾರೆ. ಪ್ರತಿ ತೀರ್ಪುಗಾರರೂ ಸ್ವತಂತ್ರವಾಗಿ 1 (ಕಡಿಮೆ) ರಿಂದ 5 (ಹೆಚ್ಚು) ರವರೆಗೆ ಅಂಕ ನೀಡುತ್ತಾರೆ. 3.0ಕ್ಕಿಂತ ಕಡಿಮೆ ಅಂಕ ಪಡೆದ ಕೃತಿಗಳನ್ನು ತೀರ್ಪುಗಾರರೊಬ್ಬರು ಬಲವಾದ ಸಮರ್ಥನೆಯೊಂದಿಗೆ ಮತ್ತೆ ನಾಮನಿರ್ದೇಶನ ಮಾಡದ ಹೊರತು ಅವು ಮುಂದಕ್ಕೆ ಹೋಗುವುದಿಲ್ಲ.
ಹಂತ 2 – Bloom Award ನಿರ್ಧಾರಗಳು
ಸರಾಸರಿ 3.0 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲ ಸಲ್ಲಿಕೆಗಳೂ ಮುಂದಿನ ಹಂತಕ್ಕೆ ಹೋಗುತ್ತವೆ. ಈ ಕೃತಿಗಳನ್ನು ಆಳವಾಗಿ ಚರ್ಚಿಸಲು ತಜ್ಞ ತೀರ್ಪುಗಾರರ ಮಂಡಳಿಗಳು ಆನ್ಲೈನ್ ಸಭೆಗಳಲ್ಲಿ ಸೇರುತ್ತವೆ. ಚರ್ಚೆಯ ಬಳಿಕ, Bloom Award ನೀಡಬೇಕೇ ಎಂಬ ಬಗ್ಗೆ ತೀರ್ಪುಗಾರರು “ಹೌದು” ಅಥವಾ “ಇಲ್ಲ” ಎಂದು ಮತ ಚಲಾಯಿಸುತ್ತಾರೆ:
3 ತೀರ್ಪುಗಾರರು: ಕನಿಷ್ಠ 2 “ಹೌದು” ಮತಗಳು ಬೇಕು
4 ತೀರ್ಪುಗಾರರು: ಕನಿಷ್ಠ 3 “ಹೌದು” ಮತಗಳು ಬೇಕು
5 ತೀರ್ಪುಗಾರರು: ಕನಿಷ್ಠ 4 “ಹೌದು” ಮತಗಳು ಬೇಕು
Bloom Award ಪಡೆಯುವ ಪ್ರತಿ ಕೃತಿಗೂ ಪ್ರಮಾಣಪತ್ರ ದೊರೆಯುತ್ತದೆ – ಅದು ಆ ವರ್ಷದ ವಿಜೇತ ಕೃತಿಗಳಲ್ಲಿ ಒಂದೆಂದು ಗುರುತಿಸುತ್ತದೆ.
ಹಂತ 3 – Best of the Best
ಎಲ್ಲ Bloom Award ವಿಜೇತರ ಕೃತಿಗಳಿಂದ 50 Best of the Best Jury ಗರಿಷ್ಠ 50 Best of the Best ಕೃತಿಗಳನ್ನು ಆಯ್ಕೆಮಾಡುತ್ತದೆ – ಇದು ಸ್ಪರ್ಧೆಯ ಅತ್ಯುನ್ನತ ಗೌರವ. ಈ ವಿಶಿಷ್ಟ ಮಂಡಳಿಯಲ್ಲಿ ವಿಶ್ವದ ವಿನ್ಯಾಸ ಕ್ಷೇತ್ರದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳಲ್ಲಿ ಕೆಲವರು ಇರುತ್ತಾರೆ.
“Best of the Best” ಎಂದು ಆಯ್ಕೆಯಾಗುವುದೆಂದರೆ, ನಿಮ್ಮ ಕೃತಿ ನಿಮ್ಮ ಕ್ಷೇತ್ರದ ತಜ್ಞರನ್ನಷ್ಟೇ ಅಲ್ಲದೆ ನಮ್ಮ ಕಾಲದ ಅತ್ಯಂತ ದೂರದೃಷ್ಟಿಯ ವಿನ್ಯಾಸಕರಲ್ಲಿ ಕೆಲವರನ್ನೂ ಮೆಚ್ಚಿಸಿದೆ ಎಂದರ್ಥ.
ವಿಜೇತರಿಗೆ ಏನು ದೊರೆಯುತ್ತದೆ
GRANSHAN Bloom Award ಗೆಲ್ಲುವುದೆಂದರೆ ಕೇವಲ ಗೌರವವೊಂದನ್ನು ಪಡೆಯುವುದಕ್ಕಿಂತ ಹೆಚ್ಚಿನದು. ನಿಮ್ಮ ಕೃತಿ ಅಕ್ಷರ ಸಂಯೋಜನೆ ಮತ್ತು ವಿನ್ಯಾಸ ಕುರಿತ ಜಾಗತಿಕ ಸಂವಾದದ ಭಾಗವಾಗುತ್ತದೆ – ಗಮನಕ್ಕೆ ಬರುತ್ತದೆ, ಸಂಭ್ರಮಿಸಲ್ಪಡುತ್ತದೆ ಮತ್ತು ನೆನಪಿನಲ್ಲಿ ಉಳಿಯುತ್ತದೆ. ಪ್ರತಿ ಮನ್ನಣೆಯೂ ನಿಮ್ಮ ಯೋಜನೆಗೆ ಗಮನ, ಸನ್ನಿವೇಶ ಮತ್ತು ದೀರ್ಘಕಾಲೀನ ಉಪಸ್ಥಿತಿಯನ್ನು ನೀಡುವಂತೆ ರೂಪಿಸಲಾಗಿದೆ.
Bloom Award
ಪುರಸ್ಕೃತವಾದ ಪ್ರತಿ ಸ್ಪರ್ಧಾಕೃತಿಗೂ GRANSHAN Bloom Award ದೊರೆಯುತ್ತದೆ – ವಿಜೇತರು ತಮ್ಮ ಯಶಸ್ಸನ್ನು ಪ್ರಸ್ತುತಪಡಿಸಲು ಬಳಸಬಹುದಾದ ಸಾಧನೆಯ ಗುರುತು. ಪ್ರಮಾಣಪತ್ರದ ಜೊತೆಗೆ, ತಮ್ಮ ಮನ್ನಣೆಯನ್ನು ಹಂಚಿಕೊಳ್ಳಲು ಸಹಾಯವಾಗುವ ಅಧಿಕೃತ ಸಾಮಗ್ರಿಗಳನ್ನು ವಿಜೇತರಿಗೆ ಒದಗಿಸಲಾಗುತ್ತದೆ – ಉದಾಹರಣೆಗೆ ಸಾಮಾಜಿಕ ಮಾಧ್ಯಮಗಳಲ್ಲಿ, ಪೋರ್ಟ್ಫೋಲಿಯೊಗಳಲ್ಲಿ ಅಥವಾ ಪತ್ರಿಕಾ ಸಂವಹನಗಳಲ್ಲಿ ಬಳಸಲು.
ಜಾಗತಿಕ ಮನ್ನಣೆ
ವಿಜೇತ ಯೋಜನೆಗಳಿಗೆ GRANSHANನ ಮತ್ತು ನಮ್ಮ ಮಾಧ್ಯಮ ಪಾಲುದಾರರ ಮಾಧ್ಯಮಗಳಲ್ಲಿ ವಿಶೇಷ ಗಮನ ನೀಡಲಾಗುತ್ತದೆ. ಹೀಗೆ ಅವು ಅಂತರರಾಷ್ಟ್ರೀಯ ವಿನ್ಯಾಸ ಸಮುದಾಯಕ್ಕೂ ಅದರಾಚೆಗೂ ತಲುಪುತ್ತವೆ. ವೃತ್ತಿಪರ ಜಾಲಗಳಲ್ಲಿ, ಜಗತ್ತಿನಾದ್ಯಂತದ ವಿನ್ಯಾಸಕರು, ಗ್ರಾಹಕರು, ಶಿಕ್ಷಕರು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಗಮನಕ್ಕೆ ನಿಮ್ಮ ಕೃತಿ ಬರುತ್ತದೆ.
ಆನ್ಲೈನ್ ಪ್ರದರ್ಶನ ಮತ್ತು ಸಂಗ್ರಹ
ಎಲ್ಲ ವಿಜೇತ ಸ್ಪರ್ಧಾಕೃತಿಗಳನ್ನೂ granshan.comನಲ್ಲಿ ಆಯ್ದು ಸಂಯೋಜಿಸಿದ ಆನ್ಲೈನ್ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಮೊದಲ ಪ್ರದರ್ಶನದ ನಂತರ, ಪ್ರತಿ ಯೋಜನೆಯೂ GRANSHANನ ಶಾಶ್ವತ ಆನ್ಲೈನ್ ಸಂಗ್ರಹದ ಭಾಗವಾಗುತ್ತದೆ – ಉಲ್ಲೇಖ, ಸಂಶೋಧನೆ ಮತ್ತು ಸ್ಫೂರ್ತಿಗಾಗಿ ಸಾರ್ವಜನಿಕರಿಗೆ ಲಭ್ಯವಿರುವ ದೀರ್ಘಕಾಲೀನ ದಾಖಲೆಯಾಗಿ ಉಳಿಯುತ್ತದೆ.
ಮುದ್ರಿತ ಮನ್ನಣೆ
ಪ್ರತಿ ವಿಜೇತರನ್ನೂ GRANSHANನ ಅಧಿಕೃತ ಮುದ್ರಿತ ಸಾಮಗ್ರಿಗಳಲ್ಲಿ ಸೇರಿಸಲಾಗುತ್ತದೆ. Best of the Best ವಿಜೇತರಿಗೆ ಈ ಸಾಮಗ್ರಿಯನ್ನು ನೇರವಾಗಿ ಕಳುಹಿಸಲಾಗುತ್ತದೆ. ಇತರ ಎಲ್ಲ ವಿಜೇತರು ವಿನಂತಿಯ ಮೇರೆಗೆ ಸಾಗಣೆ ವೆಚ್ಚವನ್ನು ಪಾವತಿಸಿ ಪಡೆಯಬಹುದು ಅಥವಾ GRANSHAN ಪ್ರದರ್ಶನಗಳು ಮತ್ತು ಸಮ್ಮೇಳನಗಳಲ್ಲಿ ಸಂಗ್ರಹಿಸಬಹುದು. ಈ ಮುದ್ರಿತ ಸಾಮಗ್ರಿಗಳು ಕೇವಲ ಕ್ಯಾಟಲಾಗ್ಗಿಂತ ಹೆಚ್ಚಿನವು – ಅಕ್ಷರ ಸಂಯೋಜನೆಯ ಉತ್ಕೃಷ್ಟತೆಯ ಸ್ಪರ್ಶಿಸಬಹುದಾದ ದಾಖಲೆಗಳು.
ಪುರಸ್ಕಾರದ ಪ್ರಥಮ ಪ್ರದರ್ಶನ ಮತ್ತು ಮುಖ್ಯ ಪ್ರದರ್ಶನ
ಅಕ್ಷರ ಸಂಯೋಜನೆ, ಸಂಸ್ಕೃತಿ ಮತ್ತು ವಿನ್ಯಾಸಕ್ಕೆ ಮೀಸಲಾದ ಸಮ್ಮೇಳನದ ಭಾಗವಾದ GRANSHAN Bloom Award ಸಮಾರಂಭದಲ್ಲಿ Best of the Best ಕೃತಿಗಳನ್ನು ಅನಾವರಣಗೊಳಿಸಲಾಗುತ್ತದೆ. ಕಾರ್ಯಕ್ರಮದ ಜೊತೆಗೆ ನಡೆಯುವ ಆಯ್ದು ಸಂಯೋಜಿಸಿದ ಪ್ರದರ್ಶನವು ಆಯ್ಕೆಯಾದ ಪ್ರತಿ ಕೃತಿಯ ಸಂಪೂರ್ಣ ಪರಿಣಾಮವನ್ನು ಅನುಭವಿಸಲು ಪ್ರೇಕ್ಷಕರಿಗೆ ಅವಕಾಶ ನೀಡುತ್ತದೆ.
ಪ್ರಾದೇಶಿಕ ಮತ್ತು ಪಾಲುದಾರ ಪ್ರದರ್ಶನಗಳು
ಪುರಸ್ಕಾರದ ಪ್ರಥಮ ಪ್ರದರ್ಶನ ಮತ್ತು ಮುಖ್ಯ ಪ್ರದರ್ಶನದ ನಂತರ, ಆಯ್ದ ಕೃತಿಗಳನ್ನು GRANSHANನ ಅಂತರರಾಷ್ಟ್ರೀಯ ಪಾಲುದಾರ ಜಾಲದ ಮೂಲಕ ಪ್ರಸ್ತುತಪಡಿಸಲಾಗುತ್ತದೆ – ವಿಶ್ವದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ನಡೆಯಬಹುದಾದ ಪ್ರಾದೇಶಿಕ ಪ್ರದರ್ಶನಗಳೂ ಇದರಲ್ಲಿ ಸೇರಿವೆ.
ಪ್ರದರ್ಶನಗಳು ಮತ್ತು ಪ್ರಕಟಣೆಗಳಲ್ಲಿ ಸೇರಿಸಲು ಅನುಕೂಲವಾಗುವಂತೆ, ಎಲ್ಲ ಭಾಗವಹಿಸುವವರೂ ಸಲ್ಲಿಕೆಯ ಸಮಯದಲ್ಲಿ ಕನಿಷ್ಠ ಒಂದು ಮುದ್ರಣಕ್ಕೆ ಸಿದ್ಧವಾದ ಚಿತ್ರ ಅಥವಾ ಮರುಪ್ರತಿಯನ್ನು ಒದಗಿಸಬೇಕು.
ವಿಭಾಗಗಳು ಮತ್ತು ಶುಲ್ಕಗಳು
GRANSHAN Bloom Award ಸಮುದಾಯದಿಂದ, ಸಮುದಾಯಕ್ಕಾಗಿ ರೂಪುಗೊಂಡಿದೆ.
ಎಲ್ಲ ಗಾತ್ರಗಳ ಮತ್ತು ಎಲ್ಲ ಆರ್ಥಿಕ ಸನ್ನಿವೇಶಗಳ ವಿನ್ಯಾಸಕರು ಹಾಗೂ ಸಂಸ್ಥೆಗಳಿಗೆ ಭಾಗವಹಿಸುವಿಕೆಯನ್ನು ಸಾಧ್ಯವಾಗಿಸುವುದು ನಮ್ಮ ಉದ್ದೇಶ. ಜೊತೆಗೆ, ಸ್ಪರ್ಧೆಯನ್ನು ಆಯೋಜಿಸಲು, ತೀರ್ಪು ಪ್ರಕ್ರಿಯೆಯನ್ನು ನಡೆಸಲು ಮತ್ತು ವಿಜೇತರನ್ನು ಅರ್ಥಪೂರ್ಣವಾಗಿ ಗೌರವಿಸಲು ನಮಗೆ ಸಾಧ್ಯವಾಗುವಂತೆ ನೋಡಿಕೊಳ್ಳುವುದೂ ಮುಖ್ಯ.
ಪ್ರಕ್ರಿಯೆಯನ್ನು ನ್ಯಾಯಸಮ್ಮತವಾಗಿರಿಸಲು, ಸ್ವಯಂ ಮೌಲ್ಯಮಾಪನದ ಆಧಾರದಲ್ಲಿ ನಾವು ಮೂರು ಶುಲ್ಕ ಸ್ತರಗಳನ್ನು ನೀಡುತ್ತೇವೆ:
ಕಡಿಮೆ ಆದಾಯದವರು / ವಿದ್ಯಾರ್ಥಿಗಳು / ವೃತ್ತಿ ತರಬೇತಿದಾರರು / ಸ್ವತಂತ್ರ ವೃತ್ತಿಪರರು – ಸೀಮಿತ ಸಂಪನ್ಮೂಲಗಳಿರುವ ವ್ಯಕ್ತಿಗಳು, ವಿದ್ಯಾರ್ಥಿಗಳು ಮತ್ತು ಸ್ವತಂತ್ರ ವಿನ್ಯಾಸಕರಿಗಾಗಿ.
ಸಣ್ಣ ಮತ್ತು ಮಧ್ಯಮ ಕಂಪನಿಗಳು – ಸಣ್ಣ ತಂಡಗಳು ಮತ್ತು ಮಿತ ವಹಿವಾಟು ಹೊಂದಿರುವ ಸ್ಟುಡಿಯೊಗಳು ಹಾಗೂ ಏಜೆನ್ಸಿಗಳಿಗಾಗಿ.
ದೊಡ್ಡ ಕಂಪನಿಗಳು – ಹೆಚ್ಚಿನ ಸಾಂಸ್ಥಿಕ ಸಾಮರ್ಥ್ಯ ಹೊಂದಿರುವ ಸ್ಥಾಪಿತ ಏಜೆನ್ಸಿಗಳು, ಕಂಪನಿಗಳು ಅಥವಾ ಸಂಸ್ಥೆಗಳಿಗಾಗಿ.
ಪ್ರತಿ ಭಾಗವಹಿಸುವವರೂ ತಮ್ಮ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುವ ಸ್ತರವನ್ನು ಆಯ್ಕೆಮಾಡುತ್ತಾರೆ ಎಂದು ನಾವು ನಂಬುತ್ತೇವೆ. ಸಲ್ಲಿಕೆ ಮುಗಿಯುವವರೆಗೂ ಶುಲ್ಕಗಳು ಒಂದೇ ಆಗಿರುತ್ತವೆ – ಹಂತಗಳಿಲ್ಲ, ಬೆಲೆ ಏರಿಕೆಯಿಲ್ಲ. “ಅಭಿಯಾನಗಳು” ಮತ್ತು “ದೃಶ್ಯ ಗುರುತು ಮತ್ತು ಬ್ರ್ಯಾಂಡಿಂಗ್” ವಿಭಾಗಗಳ ಶುಲ್ಕ ಇತರ ವಿಭಾಗಗಳ ಶುಲ್ಕಕ್ಕಿಂತ ದುಪ್ಪಟ್ಟು. ಪ್ರವೇಶ ಶುಲ್ಕವೇ ಏಕೈಕ ಕಡ್ಡಾಯ ವೆಚ್ಚ: ವಿಜೇತ ಶುಲ್ಕಗಳಿಲ್ಲ, ಗುಪ್ತ ಶುಲ್ಕಗಳಿಲ್ಲ.
ಶುಲ್ಕವು ಪ್ರತಿ ಸಲ್ಲಿಕೆಗೂ ಪ್ರತಿ ಮಾಧ್ಯಮ ವಿಭಾಗಕ್ಕೂ ಅನ್ವಯಿಸುತ್ತದೆ – ಒಂದು ಯೋಜನೆಯನ್ನು ಒಂದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಸಲ್ಲಿಸಿದರೆ, ಪ್ರತಿ ಸ್ಪರ್ಧಾಕೃತಿಯನ್ನೂ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅದಕ್ಕೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕು. 2026ರ ಅಕ್ಟೋಬರ್ 27ಕ್ಕೂ ಮೊದಲು ಸಲ್ಲಿಸಿದ ಸ್ಪರ್ಧಾಕೃತಿಗಳಿಗೆ ದೊರೆಯುವ ಒಂದು ಹೆಚ್ಚುವರಿ ಉಚಿತ ಸ್ಪರ್ಧಾಕೃತಿ ಮಾತ್ರ ಇದಕ್ಕೆ ಅಪವಾದ.
ಈಗಾಗಲೇ ಸಲ್ಲಿಸಿದ್ದೀರಾ? ನಿಮ್ಮ ಸ್ಪರ್ಧಾಕೃತಿ ಇದ್ದಂತೆಯೇ ಉಳಿಯುತ್ತದೆ. 2026ರ ಅಕ್ಟೋಬರ್ 27ಕ್ಕೂ ಮೊದಲು ಸಲ್ಲಿಸಿದ ಸ್ಪರ್ಧಾಕೃತಿಗಳನ್ನು 2026ರ ಡಿಸೆಂಬರ್ 22ರವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಅಥವಾ ಪೂರ್ಣಗೊಳಿಸಬಹುದು. ಈಗ ಶುಲ್ಕಗಳು ಕಡಿಮೆಯಾಗಿರುವುದರಿಂದ, ನಿಮಗೆ ಒಂದು ಹೆಚ್ಚುವರಿ ಉಚಿತ ಸ್ಪರ್ಧಾಕೃತಿಯ ಅವಕಾಶವೂ ದೊರೆಯುತ್ತದೆ; ನಾವು ನಿಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸುತ್ತೇವೆ.
| ವಿಭಾಗ | ಕಡಿಮೆ ಆದಾಯದವರು / ವಿದ್ಯಾರ್ಥಿಗಳು / ಸ್ವತಂತ್ರ ವೃತ್ತಿಪರರು | ಸಣ್ಣ ಮತ್ತು ಮಧ್ಯಮ ಕಂಪನಿಗಳು | ದೊಡ್ಡ ಕಂಪನಿಗಳು |
|---|---|---|---|
| 1. ಸಂಪಾದಕೀಯ ವಿನ್ಯಾಸ ಮತ್ತು ಪ್ರಕಾಶನ | 15 € | 45 € | 125 € |
| 2. ಪೋಸ್ಟರ್ಗಳು (ಮುದ್ರಿತ ಮತ್ತು ಡಿಜಿಟಲ್) | 15 € | 45 € | 125 € |
| 3. ಪ್ಯಾಕೇಜಿಂಗ್ ವಿನ್ಯಾಸ | 15 € | 45 € | 125 € |
| 4. ಡಿಜಿಟಲ್ ಮಾಧ್ಯಮ ಮತ್ತು ಇಂಟರ್ಫೇಸ್ ವಿನ್ಯಾಸ | 15 € | 45 € | 125 € |
| 5. ಮೋಷನ್ ಗ್ರಾಫಿಕ್ಸ್ ಮತ್ತು ಅನಿಮೇಷನ್ | 15 € | 45 € | 125 € |
| 6. ಸ್ಥಳ ಮತ್ತು ಅನುಭವ ವಿನ್ಯಾಸ | 15 € | 45 € | 125 € |
| 7. ಅಭಿಯಾನಗಳು | 30 € | 90 € | 250 € |
| 8. ದೃಶ್ಯ ಗುರುತು ಮತ್ತು ಬ್ರ್ಯಾಂಡಿಂಗ್ | 30 € | 90 € | 250 € |
| 9. ಪ್ರಾಯೋಗಿಕ, ಅಪ್ರಕಟಿತ ಮತ್ತು ಸುಲೇಖನ ಕೃತಿಗಳು | 15 € | 45 € | 125 € |
ಸಲ್ಲಿಕೆಯ ವೇಳಾಪಟ್ಟಿ ಮತ್ತು ತೀರ್ಪು ಪ್ರಕ್ರಿಯೆ
GRANSHAN Bloom Award ಸ್ಪಷ್ಟ ಹಂತಗಳಲ್ಲಿ ನಡೆಯುತ್ತದೆ – ನಿಮ್ಮ ಅತ್ಯುತ್ತಮ ಕೃತಿಯನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ನೀಡುತ್ತದೆ ಮತ್ತು ನ್ಯಾಯಸಮ್ಮತವಾದ, ಕೂಲಂಕಷವಾದ ಮೌಲ್ಯಮಾಪನವನ್ನು ಖಚಿತಪಡಿಸುತ್ತದೆ.
ಸಲ್ಲಿಕೆಯ ಹಂತ
ಸಲ್ಲಿಕೆ ಆರಂಭ: 2025ರ ಡಿಸೆಂಬರ್
2026ರ ಅಕ್ಟೋಬರ್ 27ರಿಂದ ಎಲ್ಲರಿಗೂ ಕಡಿಮೆ ಪ್ರವೇಶ ಶುಲ್ಕಗಳು; ಸಲ್ಲಿಕೆ ಮುಗಿಯುವವರೆಗೂ ಒಂದೇ ಶುಲ್ಕ – ಹಂತಗಳಿಲ್ಲ, ಬೆಲೆ ಏರಿಕೆಯಿಲ್ಲ
ಸಲ್ಲಿಕೆ ಮುಕ್ತಾಯ: 2026ರ ಡಿಸೆಂಬರ್ 22 – ಇದೇ ಅಂತಿಮ ದಿನಾಂಕ; ಮತ್ತಷ್ಟು ವಿಸ್ತರಣೆ ಇರುವುದಿಲ್ಲ
ಸಲ್ಲಿಕೆಯ ನಂತರ
ಆಡಳಿತಾತ್ಮಕ ಸಿದ್ಧತೆ: 2026ರ ಡಿಸೆಂಬರ್ – ಎಲ್ಲ ಸ್ಪರ್ಧಾಕೃತಿಗಳನ್ನೂ ತೀರ್ಪುಗಾರರ ಮಂಡಳಿಯ ಪರಿಶೀಲನೆಗೆ ಸಿದ್ಧಪಡಿಸಲಾಗುತ್ತದೆ.
ಮೌಲ್ಯಮಾಪನ ಮತ್ತು ಅಂತಿಮ ಆಯ್ಕೆ: 2027ರ ಜನವರಿ – ಏಪ್ರಿಲ್ – ಲಿಪಿ ಗುಂಪುಗಳು ಮತ್ತು ಅವುಗಳ ತಜ್ಞ ತೀರ್ಪುಗಾರರ ಮಂಡಳಿಗಳು ಜನವರಿಯಲ್ಲಿ ಸ್ಪರ್ಧಾಕೃತಿಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡುತ್ತವೆ. ನಂತರ ಫೆಬ್ರವರಿಯಲ್ಲಿ ಸಂಚಾಲಿತ ಚರ್ಚೆಗಳು ನಡೆದು, ಮಾರ್ಚ್ನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ; 50 Best of the Best Jury ಏಪ್ರಿಲ್ನಲ್ಲಿ ತನ್ನ ಆಯ್ಕೆಯನ್ನು ಮಾಡುತ್ತದೆ.
ವಿಜೇತರ ಘೋಷಣೆ: 2027ರ ಮೊದಲಾರ್ಧದ ಕೊನೆಯ ವೇಳೆಗೆ – GRANSHAN Conference & Ceremony ವೇದಿಕೆಯಲ್ಲಿ ವಿಜೇತರನ್ನು ಬಹಿರಂಗಪಡಿಸಲಾಗುತ್ತದೆ (ಸ್ಥಳ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುತ್ತದೆ).
ನಾವು ಉಳಿಸಿಕೊಳ್ಳುವ ಭರವಸೆ: 2026ರ ಮಾರ್ಚ್ 17ರಂದು ಮುಗಿದ ಹಿಂದಿನ ಮುಂಗಡ ಸಲ್ಲಿಕೆ ಅವಧಿಯಲ್ಲಿ ಸಲ್ಲಿಕೆಯಾಗಿ, ನಂತರ ಪುರಸ್ಕಾರ ಪಡೆಯುವ ಸ್ಪರ್ಧಾಕೃತಿಗಳಿಗೆ ವಿಶೇಷ ಮನ್ನಣೆ ದೊರೆಯುತ್ತದೆ. ಸ್ಪರ್ಧೆಯ ನಂತರದ GRANSHANನ ಸಂವಹನಗಳಲ್ಲಿ ಈ ಮುಂಗಡ ಸಲ್ಲಿಕೆಯ ವಿಜೇತರನ್ನು ಮೊದಲಿಗೆ ಪರಿಚಯಿಸಲಾಗುತ್ತದೆ. ಹೀಗೆ ಫಲಿತಾಂಶಗಳನ್ನು ಜಗತ್ತಿಗೆ ಘೋಷಿಸುವಾಗ ಅವರ ಕೃತಿಗಳಿಗೆ ಗಮನ ಸೆಳೆಯುವಲ್ಲಿ ಮುನ್ನಡೆ ದೊರೆಯುತ್ತದೆ.
GRANSHAN Supporting Foundries Club
ಮಧ್ಯಮ ಗಾತ್ರದ ಅಕ್ಷರಶೈಲಿ ಸಂಸ್ಥೆಗಳ ಗುಂಪೊಂದು GRANSHAN Bloom Award ಅನ್ನು ರೂಪಿಸಲು ಮತ್ತು ಆರಂಭಿಸಲು ಕೈಜೋಡಿಸಿದೆ – ಆರ್ಥಿಕವಾಗಿಯೂ ಕಾರ್ಯತಂತ್ರದ ದೃಷ್ಟಿಯಿಂದಲೂ ಕೊಡುಗೆ ನೀಡಿದೆ. ಅವು ಸ್ಪರ್ಧೆಯ ಒಟ್ಟಾರೆ ಪರಿಕಲ್ಪನೆಯನ್ನು ಬೆಂಬಲಿಸಿವೆ. ಈಗ ತಮ್ಮದೇ ಮಾಧ್ಯಮಗಳ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿವೆ.
ಪ್ರತಿ ಬೆಂಬಲಿಗ ಅಕ್ಷರಶೈಲಿ ಸಂಸ್ಥೆಯೂ ವಿಶೇಷ ಮನ್ನಣೆಯನ್ನು ನೀಡುತ್ತದೆ: ತನ್ನ ಅಕ್ಷರಶೈಲಿಗಳನ್ನು ಬಳಸಿರುವ ಒಂದು ವಿಜೇತ ಯೋಜನೆಯನ್ನು ಆಯ್ಕೆಮಾಡಿ, ತನ್ನ ವೇದಿಕೆಗಳಲ್ಲಿ, GRANSHAN ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅದಕ್ಕೆ ಮೀಸಲಾದ ಪ್ರದರ್ಶನಗಳ ಮೂಲಕ ವಿಶೇಷ ಗಮನ ನೀಡುತ್ತದೆ.
ಅವುಗಳ ಪಾಲ್ಗೊಳ್ಳುವಿಕೆ ಸಂಪೂರ್ಣವಾಗಿ ಬೆಂಬಲಕ್ಕೆ ಸೀಮಿತವಾಗಿದೆ – ತೀರ್ಪು ಪ್ರಕ್ರಿಯೆಯಲ್ಲಿ ಅವು ಭಾಗವಹಿಸುವುದಿಲ್ಲ. ಬದಲಾಗಿ, ಸ್ಪರ್ಧೆಯ ಅಡಿಪಾಯವನ್ನು ಬಲಪಡಿಸುವುದು, ಅದರ ಸಂವಹನಕ್ಕೆ ಬೆಂಬಲ ನೀಡುವುದು ಮತ್ತು ಜಗತ್ತಿನಾದ್ಯಂತ ಅದರ ವಿಜೇತರನ್ನು ಸಂಭ್ರಮಿಸುವುದು ಅವುಗಳ ಪಾತ್ರ. ಈ ವಿಶೇಷ ಸಂಬಂಧವು ಅದಕ್ಕಾಗಿಯೇ ಮೀಸಲಾದ Supporting Foundry Choice ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತದೆ – ಅಕ್ಷರಶೈಲಿ ಸಂಸ್ಥೆಯ ಅಕ್ಷರಶೈಲಿಗಳನ್ನು ಅಸಾಧಾರಣವಾಗಿ ಬಳಸಿರುವ ಕೃತಿಗಳನ್ನು ಮುನ್ನೆಲೆಗೆ ತರುವ ವಿಶಿಷ್ಟ ಪುರಸ್ಕಾರ.
ಸಲ್ಲಿಕೆ ಸಾಧನ ಮತ್ತು ಮಾಧ್ಯಮ ವಿಭಾಗಗಳ ಸ್ವರೂಪಗಳು
GRANSHAN Bloom Awardನ ಎಲ್ಲ ಸ್ಪರ್ಧಾಕೃತಿಗಳನ್ನೂ ನಮ್ಮ ವಿಶೇಷ ಸಲ್ಲಿಕೆ ಸಾಧನದ ಮೂಲಕ ಸಲ್ಲಿಸಬೇಕು. ಸ್ಪರ್ಧಾ ವೇದಿಕೆಗಳ ತಜ್ಞರ ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯು ನಿಮ್ಮ ಕೃತಿಯನ್ನು ಅಗತ್ಯವಾದ ಡಿಜಿಟಲ್ ಸ್ವರೂಪಗಳಲ್ಲಿ ಅಪ್ಲೋಡ್ ಮಾಡಲು ಅವಕಾಶ ನೀಡುತ್ತದೆ ಮತ್ತು ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಮಾರ್ಗದರ್ಶನ ಮಾಡುತ್ತದೆ. ಕೆಲಸ ಮುಂದುವರಿದಂತೆ ನಿಮ್ಮ ಸ್ಪರ್ಧಾಕೃತಿ ಉಳಿಯುತ್ತಿರುತ್ತದೆ. ಆದ್ದರಿಂದ ಶುಲ್ಕ ಪಾವತಿಸುವವರೆಗೆ ಅದನ್ನು ಬೇಕಾದಷ್ಟು ಬಾರಿ ಪರಿಷ್ಕರಿಸಬಹುದು ಮತ್ತು ನವೀಕರಿಸಬಹುದು – ಬೇಗ ಆರಂಭಿಸಿ, ಮುಂದುವರಿದಂತೆ ಸುಧಾರಿಸಿ. ಪ್ರವೇಶ ಶುಲ್ಕ ಪಾವತಿಸಿದಾಗಲೇ ಸ್ಪರ್ಧಾಕೃತಿ ಸಲ್ಲಿಕೆಯಾಗುತ್ತದೆ; ಪಾವತಿಯ ನಂತರ ಅದನ್ನು ಲಾಕ್ ಮಾಡಲಾಗುತ್ತದೆ ಮತ್ತು ಇನ್ನು ತಿದ್ದುಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. 2026ರ ಅಕ್ಟೋಬರ್ 27ಕ್ಕೂ ಮೊದಲು ಸಲ್ಲಿಸಿದ ಸ್ಪರ್ಧಾಕೃತಿಗಳನ್ನು 2026ರ ಡಿಸೆಂಬರ್ 22ರವರೆಗೆ ಉಚಿತವಾಗಿ ಪರಿಷ್ಕರಿಸಬಹುದು ಅಥವಾ ಪೂರ್ಣಗೊಳಿಸಬಹುದು.
ಭೌತಿಕ ಅಥವಾ ಮುದ್ರಿತ ಕೃತಿಗಳಿಗೆ ಉತ್ತಮ ಗುಣಮಟ್ಟದ ಡಿಜಿಟಲ್ ದಾಖಲಾತಿ ಅತ್ಯಗತ್ಯ – ಕೃತಿಯನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವ ಛಾಯಾಚಿತ್ರಗಳು, ಸ್ಕ್ಯಾನ್ಗಳು ಅಥವಾ ವಿಡಿಯೊ ದಾಖಲೆಗಳು. ಉದಾಹರಣೆಗೆ, ನಿಯತಕಾಲಿಕೆಯನ್ನು ಪುಟಗಳನ್ನು ತಿರುವಿ ನೋಡಬಹುದಾದ PDF ಆಗಿಯೂ, ಪುಟಗಳನ್ನು ತಿರುವಿ ತೋರಿಸುವ ಕಿರು ವಿಡಿಯೊ ಆಗಿಯೂ ಅಪ್ಲೋಡ್ ಮಾಡಬಹುದು. ಅಕ್ಷರ ಸಂಯೋಜನೆಯ ಸೂಕ್ಷ್ಮತೆಗಳನ್ನು ತೋರಿಸಲು ಪ್ರತ್ಯೇಕ ಪುಟಗಳ ಅಧಿಕ ರೆಸಲ್ಯೂಶನ್ ಚಿತ್ರಗಳನ್ನೂ ಸೇರಿಸಬಹುದು.
ಸಲ್ಲಿಕೆ ಸಾಧನವನ್ನು ನಿಮ್ಮ ಯೋಜನೆಯ ಕಡತಗಳಷ್ಟೇ ಅಲ್ಲದೆ, ತೀರ್ಪುಗಾರರ ಮಂಡಳಿಯ ಮೌಲ್ಯಮಾಪನಕ್ಕೆ ಬೇಕಾದ ಮಾಹಿತಿಯನ್ನೂ ಸಂಗ್ರಹಿಸುವಂತೆ ರೂಪಿಸಲಾಗಿದೆ. ಪುರಸ್ಕಾರ ದೊರೆತರೆ ಅದೇ ಮಾಹಿತಿಯನ್ನು ನಮ್ಮ ಆನ್ಲೈನ್ ಪ್ರದರ್ಶನ, ಮುದ್ರಿತ ಕ್ಯಾಟಲಾಗ್ ಮತ್ತು ಭೌತಿಕ ಪ್ರದರ್ಶನಗಳಲ್ಲಿ ತಕ್ಷಣ ಬಳಸಬಹುದು. ನೀವು ಈ ಕೆಳಗಿನವುಗಳನ್ನು ಒದಗಿಸಬೇಕು:
ಭಾಗವಹಿಸುವವರ ವಿವರಗಳು ಮತ್ತು ಸಂಪರ್ಕ ಮಾಹಿತಿ
ಚಿತ್ರಗಳು (jpg, png), PDFಗಳು, ವಿಡಿಯೊಗಳು
ಯೋಜನೆಯ ಸಂಕ್ಷಿಪ್ತ ವಿವರಣೆ
ಎಲ್ಲ ಕೊಡುಗೆದಾರರ ಹೆಸರುಗಳು ಮತ್ತು ಪಾತ್ರಗಳು; ಪ್ರತಿಯೊಬ್ಬರ ಭಾವಚಿತ್ರ ಮತ್ತು ಕಿರು ಜೀವನಪರಿಚಯದೊಂದಿಗೆ
ನಿಮ್ಮ ಕೃತಿಗೆ ಪುರಸ್ಕಾರ ದೊರೆತರೆ, ಮತ್ತಷ್ಟು ಸಂಪಾದನೆಯ ಅಗತ್ಯವಿಲ್ಲದೆ ಡಿಜಿಟಲ್ ಪ್ರೊಜೆಕ್ಷನ್, ದೊಡ್ಡ ಗಾತ್ರದ ಮುದ್ರಣ ಅಥವಾ ಆನ್ಲೈನ್ ಪ್ರಸ್ತುತಿಗೆ ಬಳಸಲು ಸಾಧ್ಯವಾಗುವಂತೆ ಎಲ್ಲ ಸಾಮಗ್ರಿಗಳನ್ನು ಸಿದ್ಧಪಡಿಸಬೇಕು. ತಜ್ಞ ತೀರ್ಪುಗಾರರ ಮೌಲ್ಯಮಾಪನದಲ್ಲಿ ನಿಮ್ಮ ಕೃತಿಯನ್ನು ಪರಿಶೀಲಿಸಲು ಮತ್ತು ಮೌಲ್ಯಮಾಪನ ಮಾಡಲು ಇದೇ ವೇದಿಕೆಯನ್ನು ಬಳಸಲಾಗುತ್ತದೆ. ಗಮನಿಸಿ: ಪ್ರವೇಶ ಶುಲ್ಕ ಪಾವತಿಸಿದ ನಂತರವೇ ಸ್ಪರ್ಧಾಕೃತಿಯನ್ನು ತೀರ್ಪುಗಾರರ ಮಂಡಳಿಗೆ ಕಳುಹಿಸಲಾಗುತ್ತದೆ.
ನ್ಯಾಯಸಮ್ಮತ ಮೌಲ್ಯಮಾಪನಕ್ಕಾಗಿ, ಭಾಗವಹಿಸುವವರ ಗುರುತು ಮರೆಮಾಡಿ ಎಲ್ಲ ಯೋಜನೆಗಳನ್ನೂ ತೀರ್ಪುಗಾರರ ಮಂಡಳಿಗೆ ಪ್ರಸ್ತುತಪಡಿಸಲಾಗುತ್ತದೆ. ಸಲ್ಲಿಕೆ ನಮೂನೆಯಲ್ಲಿ ನೀಡಿದ ವಿವರಣಾತ್ಮಕ ಪಠ್ಯಗಳು ಕೃತಿಯೊಂದಿಗೆ ಇರುತ್ತವೆ. ಆದರೆ ಅವು ಭಾಗವಹಿಸುವವರ ಗುರುತನ್ನು ಬಹಿರಂಗಪಡಿಸುವ ಯಾವುದೇ ಮಾಹಿತಿಯನ್ನು ಒಳಗೊಂಡಿರಬಾರದು. ಸಾಧ್ಯವಿರುವಲ್ಲಿ, ಸಲ್ಲಿಕೆಗಳಲ್ಲಿ ಅನಿಮೇಷನ್ ಅಥವಾ ಚಲನೆ ಆಧಾರಿತ ಸಾಮಗ್ರಿಗಳನ್ನು (ವಿಡಿಯೊ, GIF ಅಥವಾ ಸಮಾನ ಸ್ವರೂಪ) ಸೇರಿಸಬೇಕು. ಇದರಿಂದ ತೀರ್ಪುಗಾರರ ಮಂಡಳಿಯು ಕೃತಿಯನ್ನು ಅದರ ಉದ್ದೇಶಿತ ಚಲನಶೀಲ ರೂಪದಲ್ಲಿ ಅನುಭವಿಸಬಹುದು.
1. ಸಂಪಾದಕೀಯ ವಿನ್ಯಾಸ ಮತ್ತು ಪ್ರಕಾಶನ
ಹಂತ 1 – ಡಿಜಿಟಲ್ ಸಲ್ಲಿಕೆ
ಪ್ರಕಟಣೆಯನ್ನು ಸಂಪೂರ್ಣವಾಗಿ ತೋರಿಸುವ ಅಧಿಕ ರೆಸಲ್ಯೂಶನ್ PDF (300 dpi, ಗರಿಷ್ಠ 20 MB) – ಮುಖಪುಟ, ಆಯ್ದ ಜೋಡಿ ಪುಟಗಳು ಮತ್ತು ಅಕ್ಷರ ಸಂಯೋಜನೆಯ ಪ್ರಮುಖ ಸೂಕ್ಷ್ಮಾಂಶಗಳೊಂದಿಗೆ.
ಈ ಕೆಳಗಿನವುಗಳನ್ನು ತೋರಿಸುವ ಉತ್ತಮ ಗುಣಮಟ್ಟದ ಛಾಯಾಚಿತ್ರಗಳ ಸಮೂಹ (JPEG, 300 dpi):
ಭೌತಿಕ ವಸ್ತುವಾಗಿ ಪ್ರಕಟಣೆ (ಮುಂಭಾಗ, ಹಿಂಭಾಗ, ಬೆನ್ನು, ಗಾತ್ರವನ್ನು ಹೋಲಿಸಲು ಉಲ್ಲೇಖ)
ಒಟ್ಟಾರೆ ಸಂಯೋಜನೆಯನ್ನು ತೋರಿಸುವ ಪ್ರತ್ಯೇಕ ಪುಟಗಳು ಮತ್ತು ಜೋಡಿ ಪುಟಗಳು
ಅಕ್ಷರ ಸಂಯೋಜನೆಯ ಪ್ರಮುಖ ಅಂಶಗಳ ಸಮೀಪದ ಚಿತ್ರಗಳು
ಐಚ್ಛಿಕ: ಪ್ರಕಟಣೆಯ ಪುಟಗಳನ್ನು ತಿರುವಿ ತೋರಿಸುವ ಕಿರು ವಿಡಿಯೊ (≤2 ನಿಮಿಷ, MP4).
ಹಂತ 2 – ಕಿರುಪಟ್ಟಿಗೆ ಆಯ್ಕೆಯಾದ ನಂತರ – ಭೌತಿಕ ಸಲ್ಲಿಕೆ
ನಿಗದಿತ ಪ್ರಾದೇಶಿಕ ವಿಳಾಸಕ್ಕೆ ಪ್ರತಿ ಕೃತಿಯ ಮುದ್ರಣಕ್ಕೆ ಸಿದ್ಧವಾದ ಒಂದು ಪ್ರತಿಯನ್ನು ಸಲ್ಲಿಸಿ (ಕಿರುಪಟ್ಟಿಗೆ ಆಯ್ಕೆಯಾದ ನಂತರ ವಿವರಗಳನ್ನು ನೀಡಲಾಗುತ್ತದೆ). ಈ ಪ್ರತಿಗಳನ್ನು ನೇರ ಮೌಲ್ಯಮಾಪನಕ್ಕೆ ಬಳಸಲಾಗುತ್ತದೆ ಮತ್ತು ನಂತರ ಅವು ಭೌತಿಕ ಪ್ರದರ್ಶನದ ಭಾಗವಾಗುತ್ತವೆ.
2. ಪೋಸ್ಟರ್ಗಳು (ಮುದ್ರಿತ ಮತ್ತು ಡಿಜಿಟಲ್)
ಡಿಜಿಟಲ್ ಸಲ್ಲಿಕೆ
ಪೋಸ್ಟರ್ ಕಡತ: JPEG/PNG (300 dpi, ಅಂತಿಮ ಮುದ್ರಣ ಗಾತ್ರದಲ್ಲಿ; ಉದಾ. A1/A0 ಅಥವಾ ಜಾಹೀರಾತು ಫಲಕದ ಅನುಪಾತ)
ಹೊರಾಂಗಣ ಸ್ವರೂಪಗಳಿಗೆ: ಗಾತ್ರ ಮತ್ತು ಪರಿಣಾಮವನ್ನು ವಿವರಿಸಲು, ಪೋಸ್ಟರ್ ಅನ್ನು ಅದರ ಉದ್ದೇಶಿತ ಪರಿಸರದಲ್ಲಿ ತೋರಿಸುವ ಹೆಚ್ಚುವರಿ ಚಿತ್ರ (ಉದಾ. ರಸ್ತೆಯಲ್ಲಿರುವ 18/1 ಜಾಹೀರಾತು ಫಲಕ).
ಡಿಜಿಟಲ್ ಪೋಸ್ಟರ್ಗಳಿಗೆ: MP4 ಕಡತ (1080p, ≤3 ನಿಮಿಷ) ಅಥವಾ ಚಾಲ್ತಿಯಲ್ಲಿರುವ ಪ್ರದರ್ಶನದ ಲಿಂಕ್.
ಐಚ್ಛಿಕ: ಮುದ್ರಣಕ್ಕೆ ಸಿದ್ಧವಾದ ಆವೃತ್ತಿಗಳಿಗಾಗಿ ಕತ್ತರಿಸುವ ಗುರುತುಗಳಿರುವ PDF.
3. ಪ್ಯಾಕೇಜಿಂಗ್ ವಿನ್ಯಾಸ
ಹಂತ 1 – ಡಿಜಿಟಲ್ ಸಲ್ಲಿಕೆ
ಪ್ಯಾಕೇಜಿಂಗ್ ಅನ್ನು 3D ವಸ್ತುವಾಗಿ ಎಲ್ಲ ಸಂಬಂಧಿತ ಕೋನಗಳಿಂದ ತೋರಿಸುವ ಛಾಯಾಚಿತ್ರಗಳ ಸಮೂಹ (JPEG, 300 dpi).
ಅಕ್ಷರ ಸಂಯೋಜನೆಯ ವಿನ್ಯಾಸವನ್ನು ಅದರ ಸನ್ನಿವೇಶದಲ್ಲಿ ತೋರಿಸಲು ಅಧಿಕ ರೆಸಲ್ಯೂಶನ್ PDF ರೂಪದಲ್ಲಿ ಸಮತಟ್ಟಾದ ವಿನ್ಯಾಸ (ಬಿಚ್ಚಿದ ಡೈಲೈನ್).
ಐಚ್ಛಿಕ: ಪ್ಯಾಕೇಜ್ನೊಂದಿಗೆ ಬಳಕೆದಾರರ ಸಂವಹನವನ್ನು ತೋರಿಸುವ ಕಿರು ವಿಡಿಯೊ (≤2 ನಿಮಿಷ), ಉದಾ. ಪ್ಯಾಕೇಜ್ ತೆರೆಯುವುದು.
ಹಂತ 2 – ಕಿರುಪಟ್ಟಿಗೆ ಆಯ್ಕೆಯಾದ ನಂತರ – ಭೌತಿಕ ಸಲ್ಲಿಕೆ
ನಿಗದಿತ ಪ್ರಾದೇಶಿಕ ವಿಳಾಸಕ್ಕೆ ಪ್ರತಿ ಕೃತಿಯ ಮುದ್ರಣಕ್ಕೆ ಸಿದ್ಧವಾದ ಒಂದು ಪ್ರತಿಯನ್ನು ಸಲ್ಲಿಸಿ (ಕಿರುಪಟ್ಟಿಗೆ ಆಯ್ಕೆಯಾದ ನಂತರ ವಿವರಗಳನ್ನು ನೀಡಲಾಗುತ್ತದೆ). ಈ ಪ್ರತಿಗಳನ್ನು ನೇರ ಮೌಲ್ಯಮಾಪನಕ್ಕೆ ಬಳಸಲಾಗುತ್ತದೆ ಮತ್ತು ನಂತರ ಅವು ಭೌತಿಕ ಪ್ರದರ್ಶನದ ಭಾಗವಾಗುತ್ತವೆ.
4. ಡಿಜಿಟಲ್ ಮಾಧ್ಯಮ ಮತ್ತು ಇಂಟರ್ಫೇಸ್ ವಿನ್ಯಾಸ
ಬಳಕೆದಾರರ ಸಂವಹನ ಮತ್ತು ನ್ಯಾವಿಗೇಶನ್ ತೋರಿಸುವ ವಿಡಿಯೊ ಪರಿಚಯ (MP4, ≤3 ನಿಮಿಷ).
ಪ್ರಮುಖ ಪರದೆಗಳ ಸ್ಕ್ರೀನ್ಶಾಟ್ಗಳು (JPEG, 1920×1080 px).
ಚಾಲ್ತಿಯಲ್ಲಿರುವ ಸೈಟ್/ಅಪ್ಲಿಕೇಶನ್ನ URL (ತೀರ್ಪು ಪ್ರಕ್ರಿಯೆ ಮುಗಿಯುವವರೆಗೂ ತೆರೆಯಲು ಸಾಧ್ಯವಾಗಬೇಕು).
5. ಮೋಷನ್ ಗ್ರಾಫಿಕ್ಸ್ ಮತ್ತು ಅನಿಮೇಷನ್
MP4/MOV ರೂಪದಲ್ಲಿ ವಿಡಿಯೊ (1920 × 1080 px, ≤3 ನಿಮಿಷ, ≤3 GB)
ಐಚ್ಛಿಕ ಸ್ಟೋರಿಬೋರ್ಡ್ PDF (ಗರಿಷ್ಠ 4 ಪುಟಗಳು)
6. ಸ್ಥಳ ಮತ್ತು ಅನುಭವ ವಿನ್ಯಾಸ
ಛಾಯಾಚಿತ್ರ ಸರಣಿ (JPEG, 300 dpi): ಸನ್ನಿವೇಶ ತೋರಿಸುವ ಚಿತ್ರಗಳು + ಸೂಕ್ಷ್ಮಾಂಶಗಳ ಚಿತ್ರಗಳು
ಐಚ್ಛಿಕ ವಿಡಿಯೊ ಪರಿಚಯ (MP4, ≤2 ನಿಮಿಷ)
ಸ್ಥಳದ ನಕ್ಷೆಗಳು / ವಿನ್ಯಾಸ ರೇಖಾಚಿತ್ರಗಳು (PDF, ಸಾಧ್ಯವಿರುವಲ್ಲಿ ವೆಕ್ಟರ್ ಆಧಾರಿತ)
7. ಅಭಿಯಾನಗಳು
ಪ್ರತಿ ಪ್ರಮುಖ ಅನುಷ್ಠಾನದ ಚಿತ್ರಗಳು (JPEG) (ಮುದ್ರಣ, ಪೋಸ್ಟರ್, ಡಿಜಿಟಲ್ ಜಾಹೀರಾತುಗಳು)
ಅಭಿಯಾನವನ್ನು ಜಾರಿಗೊಳಿಸಿದ ರೀತಿಯನ್ನು ಪ್ರಸ್ತುತಪಡಿಸುವ ಐಚ್ಛಿಕ ವಿಡಿಯೊ (MP4, ≤3 ನಿಮಿಷ)
ಚಾಲ್ತಿಯಲ್ಲಿರುವ ಅಭಿಯಾನ ವೇದಿಕೆಗಳ ಲಿಂಕ್
8. ದೃಶ್ಯ ಗುರುತು ಮತ್ತು ಬ್ರ್ಯಾಂಡಿಂಗ್
ಲೋಗೊ ಸಮೂಹದ PDFಗಳು (ವೆಕ್ಟರ್ ಆಧಾರಿತ), ಜೊತೆಗೆ ಬಳಕೆಯ ಉದಾಹರಣೆಗಳು (JPEGಗಳು)
ಬ್ರ್ಯಾಂಡ್ ಅನ್ವಯದ ದೃಶ್ಯಗಳು (ಉದಾ. ಲೇಖನ ಸಾಮಗ್ರಿ, ಪ್ಯಾಕೇಜಿಂಗ್)
ಐಚ್ಛಿಕ ಮಾರ್ಗಸೂಚಿ PDF (ಗರಿಷ್ಠ 5 ಪುಟಗಳು)
9. ಪ್ರಾಯೋಗಿಕ, ಅಪ್ರಕಟಿತ ಮತ್ತು ಸುಲೇಖನ ಕೃತಿಗಳು
PDF ಪೋರ್ಟ್ಫೋಲಿಯೊ ಅಥವಾ ದಾಖಲಾತಿ (ಗರಿಷ್ಠ 10 ಪುಟಗಳು)
ಐಚ್ಛಿಕ ಡಿಜಿಟಲ್ ಮೂಲಮಾದರಿ: ವಿಡಿಯೊ ಪ್ರಾತ್ಯಕ್ಷಿಕೆ ಅಥವಾ URL
ಸಂಬಂಧಿತ ಯಾವುದೇ ಪರಿಕಲ್ಪನಾ ಸಾಮಗ್ರಿಗಳು (ರೇಖಾಚಿತ್ರಗಳು, ಸಂಶೋಧನಾ ಟಿಪ್ಪಣಿಗಳು)
ಭಾಗವಹಿಸುವಿಕೆಯ ನಿಯಮಗಳು ಮತ್ತು ನಮ್ಮ ಸಾಮಾನ್ಯ ಮೌಲ್ಯಗಳು
GRANSHAN Bloom Award ಕೇವಲ ಸ್ಪರ್ಧೆಗಿಂತ ಹೆಚ್ಚಿನದು – ಶ್ರೇಷ್ಠತೆ, ಗೌರವ ಮತ್ತು ಸಾಂಸ್ಕೃತಿಕ ಸಂವಾದಕ್ಕೆ ಎಲ್ಲರೂ ಹಂಚಿಕೊಳ್ಳುವ ನೆಲೆ. ಈ ನೆಲೆಯನ್ನು ಎಲ್ಲರಿಗೂ ಮುಕ್ತವಾಗಿ, ನ್ಯಾಯಸಮ್ಮತವಾಗಿ ಮತ್ತು ಸ್ಫೂರ್ತಿದಾಯಕವಾಗಿ ಉಳಿಸಲು ನಮ್ಮ ನಿಯಮಗಳನ್ನು ರೂಪಿಸಲಾಗಿದೆ.
ಭಾಗವಹಿಸುವಿಕೆಯು ಮೂರು ಸರಳ ಬದ್ಧತೆಗಳನ್ನು ಆಧರಿಸಿದೆ:
ನಮ್ಮ ಸಾಮಾನ್ಯ ತತ್ವಗಳು
ಭಾಗವಹಿಸುವ ಮೂಲಕ, ನೀವು GRANSHAN ಸ್ವಯಂ ಬದ್ಧತಾ ಹೇಳಿಕೆಗೆ ಒಪ್ಪುತ್ತೀರಿ. ಪರಸ್ಪರ ಅರಿವು ಮತ್ತು ಗುರುತನ್ನು ಬಲಪಡಿಸುವ ಶಕ್ತಿಯಾಗಿ ವಿನ್ಯಾಸದ ಮೇಲಿನ ನಮ್ಮ ನಂಬಿಕೆಯನ್ನು ಅದು ಪ್ರತಿಬಿಂಬಿಸುತ್ತದೆ. ಆಕ್ರಮಣ, ತಾರತಮ್ಯ ಅಥವಾ ಕಿರುಕುಳಕ್ಕೆ ವೇದಿಕೆ ನೀಡಲು ನಮ್ಮ ನಿರಾಕರಣೆಯನ್ನೂ ತಿಳಿಸುತ್ತದೆ.ಅರ್ಹತೆ
ಸಲ್ಲಿಕೆಗಳು ಸ್ವಂತ ಸೃಷ್ಟಿಯಾಗಿರಬೇಕು ಅಥವಾ ಸೃಷ್ಟಿಕರ್ತರ ಪೂರ್ಣ ಅನುಮತಿಯೊಂದಿಗೆ ಸಲ್ಲಿಸಬೇಕು. ಪ್ರತಿ ಸ್ಪರ್ಧಾಕೃತಿಯೂ ಕನಿಷ್ಠ ಒಂದು ಲ್ಯಾಟಿನ್ ಹೊರತಾದ ಲಿಪಿಯನ್ನು ಒಳಗೊಂಡಿರಬೇಕು, ಆ ಲಿಪಿ ಪಠ್ಯದ ಗಣನೀಯ ಭಾಗವನ್ನು ಹೊತ್ತಿರಬೇಕು (ಒಂದೇ ಪದ ಅಥವಾ ಅಲಂಕಾರಿಕ ಸ್ಪರ್ಶ ಸಾಕಾಗುವುದಿಲ್ಲ) ಮತ್ತು ಸ್ಪರ್ಧೆಯ ಮಾಧ್ಯಮ ವಿಭಾಗಗಳಿಗೆ ಸೇರಿರಬೇಕು. ಪ್ರಕಟಿತ, ಪ್ರಕಟಣೆಗೆ ಉದ್ದೇಶಿತ ಮತ್ತು ಅಪ್ರಕಟಿತ ಕೃತಿಗಳನ್ನು ಸ್ವಾಗತಿಸುತ್ತೇವೆ. ವಿದ್ಯಾರ್ಥಿ ಮತ್ತು ವೃತ್ತಿ ತರಬೇತಿ ಯೋಜನೆಗಳನ್ನೂ ಹಾಗೆಂದು ಸ್ಪಷ್ಟವಾಗಿ ಗುರುತಿಸಿ ಸಲ್ಲಿಸಬಹುದು.ಹಕ್ಕುಸ್ವಾಮ್ಯ ಮತ್ತು ಬಳಕೆಯ ಹಕ್ಕುಗಳು
ಸಲ್ಲಿಸುವ ಮೂಲಕ, ನಿಮ್ಮ ಕೃತಿಗೆ ಅಗತ್ಯವಾದ ಹಕ್ಕುಗಳು ನಿಮ್ಮಲ್ಲಿವೆ ಎಂದು ನೀವು ದೃಢೀಕರಿಸುತ್ತೀರಿ. ಪ್ರದರ್ಶನಗಳು, ಪ್ರಕಟಣೆಗಳು ಮತ್ತು ಪುರಸ್ಕಾರಕ್ಕೆ ಸಂಬಂಧಿಸಿದ ಮಾಧ್ಯಮಗಳಲ್ಲಿ ನಿಮ್ಮ ಕೃತಿಯನ್ನು ಪ್ರಸ್ತುತಪಡಿಸಲು GRANSHAN ಮತ್ತು ಅದರ ಪಾಲುದಾರರಿಗೆ ನೀವು ಏಕಸ್ವಾಮ್ಯವಲ್ಲದ ಪರವಾನಗಿಯನ್ನು ನೀಡುತ್ತೀರಿ – ಯಾವಾಗಲೂ ಸಮರ್ಪಕವಾಗಿ ಸೃಷ್ಟಿಕರ್ತರ ಹೆಸರು ಸೂಚಿಸುವ ಷರತ್ತಿನೊಂದಿಗೆ. ನಿಮ್ಮ ಕೃತಿಯಲ್ಲಿ ಮೂರನೇ ವ್ಯಕ್ತಿಗಳ ಸಾಮಗ್ರಿಗಳಿದ್ದರೆ, ಅವುಗಳನ್ನು ಬಳಸುವ ಹಕ್ಕುಗಳನ್ನು ಪಡೆಯುವುದು ನಿಮ್ಮ ಜವಾಬ್ದಾರಿ. ಗೌಪ್ಯ ಅಥವಾ ಪ್ರಕಟಣಾ ನಿರ್ಬಂಧವಿರುವ ಯೋಜನೆಗಳನ್ನು ವಿವೇಚನೆಯಿಂದ ನಿರ್ವಹಿಸಲಾಗುತ್ತದೆ.
ಈ ಬದ್ಧತೆಗಳು GRANSHAN Bloom Award ನ್ಯಾಯಸಮ್ಮತತೆ ಮತ್ತು ಪ್ರಾಮಾಣಿಕತೆಯಲ್ಲಿ ಬೇರೂರಿರುವಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಲಿಪಿಗಳು ಮತ್ತು ವಿನ್ಯಾಸದ ಈ ಸಂಭ್ರಮವು ಅದು ಸೇವೆ ಸಲ್ಲಿಸುವ ಸಮುದಾಯಗಳಷ್ಟೇ ಮುಕ್ತವಾಗಿ, ಎಲ್ಲರನ್ನೂ ಒಳಗೊಂಡಂತೆ ಮತ್ತು ಚೈತನ್ಯಮಯವಾಗಿ ಉಳಿಯುತ್ತದೆ.
GRANSHAN ಸ್ವಯಂ ಬದ್ಧತಾ ಹೇಳಿಕೆ
ಜಾಗತಿಕ ದೃಶ್ಯ ಗುರುತಿನ ಕೇಂದ್ರವಾಗಿ GRANSHAN ಫಾಂಟ್ಗಳು ಮತ್ತು ಅಕ್ಷರ ಸಂಯೋಜನೆ, ವಿನ್ಯಾಸ ಮತ್ತು ಸಂವಹನವನ್ನು ಸಂಭ್ರಮಿಸುತ್ತದೆ. ಹೀಗೆ ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ಆಯಾಮಗಳ ನಡುವಿನ ಸಮತೋಲನದೊಂದಿಗೆ ಸಮುದಾಯಗಳು, ಸಂಸ್ಕೃತಿ ಮತ್ತು ಉದ್ಯಮಗಳು ಬೆಳೆಯಲು GRANSHAN ಬೆಂಬಲ ನೀಡುತ್ತದೆ. GRANSHAN ಅಂತರರಾಷ್ಟ್ರೀಯ ಪರಸ್ಪರ ಅರಿವಿನ ಯೋಜನೆ: ಉತ್ತಮ ಗುಣಮಟ್ಟದ ಫಾಂಟ್ಗಳು ಮತ್ತು ಅತ್ಯುತ್ತಮ ಅಕ್ಷರ ಸಂಯೋಜನೆಯ ಮೂಲಕ ನಿರ್ವಹಿಸುವ ಸಂವಹನವು ವಿಚಾರ ವಿನಿಮಯವನ್ನು ಸಾಧ್ಯವಾಗಿಸುತ್ತದೆ ಮತ್ತು ಗುರುತನ್ನು ಬಲಪಡಿಸುತ್ತದೆ. ನಮ್ಮ ನಿಲುವು ಎಂದಿಗೂ ಯಾರನ್ನೂ ಹೊರಗಿಡುವುದಿಲ್ಲ; ಅದು ವಿಶಾಲವಾಗಿದ್ದು ಎಲ್ಲರನ್ನೂ ಒಳಗೊಳ್ಳುತ್ತದೆ.
ಅದೇ ಸಮಯದಲ್ಲಿ, ವಿಶ್ವದಾದ್ಯಂತ ಇರುವ ನಾನಾ ರೀತಿಯ ಸಂಘರ್ಷದ ಪರಿಸ್ಥಿತಿಗಳು ಮತ್ತು ಎಲ್ಲ ಬಗೆಯ ಅನ್ಯಾಯಗಳ ಅರಿವು ನಮಗಿದೆ. ಜಾಗತಿಕವಾಗಿ ಸಕ್ರಿಯವಾಗಿರುವ ಯೋಜನೆಯಾಗಿ ನಾವು ಅವುಗಳನ್ನು ನಿಯಮಿತವಾಗಿ ಎದುರಿಸುತ್ತೇವೆ. ಹೊರಗಿನಿಂದ ಪರಿಸ್ಥಿತಿಯನ್ನು ನಿರ್ಣಯಿಸುವಾಗಿನ ಸವಾಲುಗಳು ಮತ್ತು ಅಪಾಯಗಳ ಬಗ್ಗೆ ನಮಗೆ ಎಚ್ಚರವಿದೆ. GRANSHAN Foundationನ ಸಂಸ್ಥಾಪಕರು ಮತ್ತು ಬೆಂಬಲಿಗರಲ್ಲಿ ಈ ವಿಷಯಗಳ ಬಗ್ಗೆ ದೃಢವಾದ ಅಭಿಪ್ರಾಯ ಹೊಂದಿರುವ ಅನೇಕರು ಇದ್ದಾರೆ. ನಾವು ಅವುಗಳನ್ನು ಗೌರವಿಸುತ್ತೇವೆ. ಈ ಗೌರವ ಮತ್ತು ಮುಕ್ತ ಮನೋಭಾವ ಪರಸ್ಪರ ಇರುವವರೆಗೂ, ಈ ವೈವಿಧ್ಯಮಯ ಅಭಿಪ್ರಾಯಗಳಿಗೆ ನಮ್ಮನ್ನು ತೆರೆದುಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ಸವಾಲನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ.
ನಮ್ಮ ಎಲ್ಲ ಚಟುವಟಿಕೆಗಳಲ್ಲೂ ನಾವು ಮೀರದ ಮಿತಿಗಳು ಸ್ಪಷ್ಟವಾಗಿವೆ: ಯಾವುದೇ ರೂಪದ ಆಕ್ರಮಣಕಾರಿ ಯುದ್ಧ, ಭಯೋತ್ಪಾದನೆ ಅಥವಾ ಯಾವುದೇ ಬಗೆಯ ತಾರತಮ್ಯ ಮತ್ತು ಕಿರುಕುಳದ ಪರವಾಗಿ ಮಾತನಾಡುವ ಯಾರಿಗೂ ನಾವು ವೇದಿಕೆ ನೀಡಲಾರೆವು. ಅಂತರರಾಷ್ಟ್ರೀಯ ಕಾನೂನು, ಪರಸ್ಪರ ಅರಿವು ಮತ್ತು ಸಹಕಾರದ ಮೇಲೆ ಸ್ಥಾಪಿತವಾದ ವಿಶ್ವವ್ಯವಸ್ಥೆಯ ಪರವಾಗಿ ನಾವು ನಿಲ್ಲುತ್ತೇವೆ.
ಅರ್ಹತೆ ಮತ್ತು ಹಕ್ಕುಸ್ವಾಮ್ಯ ಘೋಷಣೆ
1. ಅರ್ಹತೆಯ ಮಾನದಂಡಗಳು
1.1 ಸಲ್ಲಿಕೆಗಳು ಭಾಗವಹಿಸುವವರು ರಚಿಸಿದ ಸ್ವಂತ ಕೃತಿಗಳಾಗಿರಬೇಕು ಅಥವಾ ಮೂಲ ಸೃಷ್ಟಿಕರ್ತರ ಸ್ಪಷ್ಟ ಅನುಮತಿಯೊಂದಿಗೆ ಸಲ್ಲಿಸಬೇಕು.
1.2 ಅರ್ಹ ಸ್ಪರ್ಧಾಕೃತಿಗಳು ಕನಿಷ್ಠ ಒಂದು ಲ್ಯಾಟಿನ್ ಹೊರತಾದ ಲಿಪಿಯನ್ನು ಒಳಗೊಂಡಿರಬೇಕು ಮತ್ತು ಸ್ಪರ್ಧೆಯ ನಿಗದಿತ ಮಾಧ್ಯಮ ವಿಭಾಗಗಳಿಗೆ ಸೇರಿರಬೇಕು.
1.3 ಈ ಕೆಳಗಿನ ಸ್ವರೂಪಗಳಲ್ಲಿ ಸಲ್ಲಿಕೆಗಳನ್ನು ಸ್ವೀಕರಿಸಲಾಗುತ್ತದೆ:
ಪ್ರಕಟಿತ ಕೃತಿ (ವಾಣಿಜ್ಯವಾಗಿ ಬಿಡುಗಡೆ ಮಾಡಿದ ಅಥವಾ ಕಾರ್ಯಾದೇಶದ ಮೇರೆಗೆ ರಚಿಸಿದ)
ಪ್ರಕಟಣೆಗೆ ಉದ್ದೇಶಿತ ಕೃತಿ (ಇನ್ನೂ ಬಿಡುಗಡೆಯಾಗದಿದ್ದರೂ ಪ್ರಕಟಿಸುವ ಉದ್ದೇಶವಿರುವ)
ಅಪ್ರಕಟಿತ ಕೃತಿ (ಪರಿಕಲ್ಪನಾತ್ಮಕ, ಸಂಶೋಧನೆ ಆಧಾರಿತ ಅಥವಾ ಸಾಧ್ಯತೆಗಳನ್ನು ಪರೀಕ್ಷಿಸುವ)
1.4 ವಿದ್ಯಾರ್ಥಿ ಮತ್ತು ವೃತ್ತಿ ತರಬೇತಿ ಯೋಜನೆಗಳು ಅರ್ಹವಾಗಿವೆ. ಸಲ್ಲಿಕೆಯ ಸಮಯದಲ್ಲಿ ಅವುಗಳನ್ನು ಹಾಗೆಂದು ಸ್ಪಷ್ಟವಾಗಿ ಗುರುತಿಸಬೇಕು.
2. ಹಕ್ಕುಸ್ವಾಮ್ಯ ಮತ್ತು ಬಳಕೆಯ ಹಕ್ಕುಗಳು
2.1 ಸಲ್ಲಿಸಿದ ಕೃತಿಗಳ ಎಲ್ಲ ಹಕ್ಕುಸ್ವಾಮ್ಯವೂ ಭಾಗವಹಿಸುವವರಲ್ಲೇ ಉಳಿಯುತ್ತದೆ. ಭಾಗವಹಿಸುವ ಮೂಲಕ, ಅವರು GRANSHAN ಮತ್ತು ಅದರ ಪಾಲುದಾರರಿಗೆ ಕೆಳಗೆ ವಿವರಿಸಿದ ನಿರ್ದಿಷ್ಟ, ಸೀಮಿತ ಬಳಕೆಯ ಹಕ್ಕುಗಳನ್ನು ಮಾತ್ರ ನೀಡುತ್ತಾರೆ. ಅವುಗಳನ್ನು GRANSHAN Bloom Awardಗೆ ಸಂಬಂಧಿಸಿದ ಉದ್ದೇಶಗಳಿಗೆ ಮಾತ್ರ ಬಳಸಬಹುದು.
2.2 ಸ್ಪರ್ಧಾಕೃತಿಯನ್ನು ಸಲ್ಲಿಸುವ ಮೂಲಕ, ಭಾಗವಹಿಸುವವರು ತಾವು ಸಲ್ಲಿಸಿದ ಕೃತಿಯ ಕಾನೂನುಬದ್ಧ ಹಕ್ಕುಸ್ವಾಮ್ಯ ಹೊಂದಿರುವವರು ಅಥವಾ ನ್ಯಾಯಸಮ್ಮತ ಹಕ್ಕುಸ್ವಾಮ್ಯ ಹೊಂದಿರುವವರಿಂದ ಪೂರ್ಣ ಲಿಖಿತ ಅನುಮತಿ ಪಡೆದವರು ಎಂದು ದೃಢೀಕರಿಸುತ್ತಾರೆ.
2.3 ಭಾಗವಹಿಸುವವರು GRANSHAN ಮತ್ತು ಅದರ ಅಧಿಕೃತ ಪಾಲುದಾರರಿಗೆ ಈ ಕೆಳಗಿನವುಗಳಿಗಾಗಿ ಏಕಸ್ವಾಮ್ಯವಲ್ಲದ, ವಿಶ್ವವ್ಯಾಪಿ, ರಾಯಲ್ಟಿ ರಹಿತ ಪರವಾನಗಿಯನ್ನು ನೀಡುತ್ತಾರೆ:
ಪ್ರದರ್ಶನಗಳು, ಮುದ್ರಿತ ಮತ್ತು ಡಿಜಿಟಲ್ ಪ್ರಕಟಣೆಗಳು, ದಾಖಲಾತಿ ಹಾಗೂ ಪುರಸ್ಕಾರಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳು ಸೇರಿದಂತೆ, GRANSHAN Bloom Awardಗೆ ಸಂಬಂಧಿಸಿದ ವಾಣಿಜ್ಯೇತರ ಉದ್ದೇಶಗಳಿಗಾಗಿ ಕೃತಿಯನ್ನು ಮರುಉತ್ಪಾದಿಸುವುದು, ಪ್ರದರ್ಶಿಸುವುದು ಮತ್ತು ವಿತರಿಸುವುದು.
ಸೃಷ್ಟಿಕರ್ತರ ಹೆಸರನ್ನು ಸಮರ್ಪಕವಾಗಿ ಸೂಚಿಸಿ, ಭವಿಷ್ಯದ GRANSHAN ಪ್ರಕಟಣೆಗಳು, ಸಂಶೋಧನೆ ಅಥವಾ ಹಿನ್ನೋಟ ವಿಮರ್ಶೆಗಳಿಗಾಗಿ ಕೃತಿಯನ್ನು ಸಂಗ್ರಹಿಸುವುದು ಮತ್ತು ಅವುಗಳಲ್ಲಿ ಪ್ರಸ್ತುತಪಡಿಸುವುದು.
3. ಮೂರನೇ ವ್ಯಕ್ತಿಗಳ ಸಾಮಗ್ರಿಗಳ ಬಳಕೆ
3.1 ಸಲ್ಲಿಸಿದ ಕೃತಿಯು ಮೂರನೇ ವ್ಯಕ್ತಿಗಳಿಗೆ ಸೇರಿದ ಫಾಂಟ್ಗಳು, ಚಿತ್ರಗಳು ಅಥವಾ ಬೌದ್ಧಿಕ ಸ್ವತ್ತಿನಂತಹ ಅಂಶಗಳನ್ನು ಒಳಗೊಂಡಿದ್ದರೆ, ಅಗತ್ಯವಿರುವ ಎಲ್ಲ ಬಳಕೆಯ ಹಕ್ಕುಗಳನ್ನು ಪಡೆಯುವ ಸಂಪೂರ್ಣ ಜವಾಬ್ದಾರಿ ಭಾಗವಹಿಸುವವರದ್ದೇ.
3.2 ಅನುಮತಿಯಿಲ್ಲದ ಮೂರನೇ ವ್ಯಕ್ತಿಗಳ ಸಾಮಗ್ರಿಗಳನ್ನು ಒಳಗೊಂಡ ಸಲ್ಲಿಕೆಗಳಿಂದ ಉಂಟಾಗುವ ಹಕ್ಕುಸ್ವಾಮ್ಯ ಉಲ್ಲಂಘನೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕಾನೂನು ದಾವೆಗಳಿಗೆ GRANSHAN Bloom Awardನ ಆಯೋಜಕರು ಯಾವುದೇ ಹೊಣೆಗಾರಿಕೆಯನ್ನು ವಹಿಸುವುದಿಲ್ಲ.
4. ಗೌಪ್ಯ ಅಥವಾ ಬಿಡುಗಡೆಗೆ ಮುಂಚಿನ ಕೃತಿಗಳು
4.1 ಸಲ್ಲಿಕೆಯು ಗೌಪ್ಯ ಅಥವಾ ಇನ್ನೂ ಬಿಡುಗಡೆಯಾಗದ ಸಾಮಗ್ರಿಗಳನ್ನು ಒಳಗೊಂಡಿದ್ದರೆ ಭಾಗವಹಿಸುವವರು ಅದನ್ನು ಸೂಚಿಸಬಹುದು. ಇಂತಹ ಸ್ಪರ್ಧಾಕೃತಿಗಳನ್ನು ವಿವೇಚನೆಯಿಂದ ನಿರ್ವಹಿಸಲಾಗುತ್ತದೆ. ಲಿಖಿತ ಬಿಡುಗಡೆ ಅನುಮತಿ ದೊರೆಯುವವರೆಗೆ ಅಥವಾ ಒಪ್ಪಿಕೊಂಡ ಪ್ರಕಟಣೆಯ ದಿನಾಂಕದವರೆಗೆ ಅವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದಿಲ್ಲ.
4.2 ಭಾಗವಹಿಸುವವರು ಪ್ರಕಟಣಾ ನಿರ್ಬಂಧಗಳನ್ನು ಅಥವಾ ಷರತ್ತುಬದ್ಧ ಪ್ರದರ್ಶನ ಮಿತಿಗಳನ್ನೂ ಕೋರಬಹುದು. ಸಾಧ್ಯವಿರುವಲ್ಲಿ ಅವುಗಳನ್ನು ಪಾಲಿಸಲಾಗುತ್ತದೆ.
5. ಒಪ್ಪಿಗೆಯ ಘೋಷಣೆ
ಸಲ್ಲಿಕೆಯ ಸಮಯದಲ್ಲಿ ಎಲ್ಲ ಭಾಗವಹಿಸುವವರೂ ಈ ಕೆಳಗಿನ ಘೋಷಣೆಗೆ ಒಪ್ಪಬೇಕು: “ಸಲ್ಲಿಸಿದ ಕೃತಿಯು ಮೂಲ ಕೃತಿಯಾಗಿದೆ, ಅದರ ಹಕ್ಕುಸ್ವಾಮ್ಯ ನನ್ನಲ್ಲಿದೆ ಅಥವಾ ಈ ಕೃತಿಯನ್ನು ಸಲ್ಲಿಸಲು ಬೇಕಾದ ಎಲ್ಲ ಹಕ್ಕುಗಳನ್ನು ನಾನು ಪಡೆದಿದ್ದೇನೆ, ಹಾಗೂ GRANSHAN Bloom Awardನ ಅರ್ಹತೆ ಮತ್ತು ಹಕ್ಕುಸ್ವಾಮ್ಯದ ಷರತ್ತುಗಳನ್ನು ನಾನು ಒಪ್ಪುತ್ತೇನೆ ಮತ್ತು ಪಾಲಿಸುತ್ತೇನೆ ಎಂದು ಈ ಮೂಲಕ ಘೋಷಿಸುತ್ತೇನೆ.”
ನಮ್ಮ ಪ್ರೀತಿಯ ಲಿಪಿಗಳು, ನಮ್ಮ ಪ್ರೀತಿಯ ಲೋಕಗಳು
ವೈಯಕ್ತಿಕ ಪರಿಣತಿಯಿಂದ ಸಾಮೂಹಿಕ ಮನ್ನಣೆಯವರೆಗಿನ ಈ ಪಯಣವು ಕೇವಲ ಪುರಸ್ಕಾರಗಳಲ್ಲಿ ಪೂರ್ಣತೆ ಕಾಣುವುದಿಲ್ಲ. ಸಂಸ್ಕೃತಿಗಳಾದ್ಯಂತ ಒಟ್ಟಾಗಿ ಗಮನ ಪಡೆಯುವುದರಲ್ಲಿ, ಸಂವಾದದಲ್ಲಿ ಮತ್ತು ಸ್ಪಂದನದಲ್ಲಿಯೂ ಅದು ಪೂರ್ಣಗೊಳ್ಳುತ್ತದೆ.
ಇದು ಡಿಜಿಟಲ್ ಮತ್ತು ಕ್ಷಣಿಕತೆಯಾಚೆಗೂ ಜೀವಂತವಾಗಿರುವ ಸಂಭ್ರಮ – ಸ್ಪರ್ಶಿಸಬಹುದಾದ ರೂಪದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಜನರು ಹಾಗೂ ಅವರ ಲಿಪಿಗಳ ನಡುವಿನ ಆಳವಾದ ಸಾಂಸ್ಕೃತಿಕ ನಂಟಿನಲ್ಲಿ ನೆಲೆಗೊಂಡಿದೆ.
ವಿಶ್ವದ ಅನೇಕ ಭಾಗಗಳಲ್ಲಿ – ಅರ್ಮೇನಿಯಾದಿಂದ ಕೊರಿಯಾವರೆಗೆ, ಥಾಯ್ಲೆಂಡ್ನಿಂದ ಭಾರತೀಯ ಉಪಖಂಡದವರೆಗೆ – ಲಿಪಿಗಳು ಕೇವಲ ಸಂವಹನ ಸಾಧನಗಳಲ್ಲ; ಅವು ಗುರುತು, ನಂಟು ಮತ್ತು ನಿರಂತರತೆಯ ಪ್ರಬಲ ಸಂಕೇತಗಳು.
GRANSHAN ಪಯಣವು ಈ ನಂಟನ್ನು ಗೌರವಿಸುತ್ತದೆ: ಬರೆಯುವ ಹಕ್ಕು, ಗಮನಕ್ಕೆ ಬರುವ ಹಕ್ಕು, ಓದಲ್ಪಡುವ ಹಕ್ಕು.
ಒಂದೇ ಅಕ್ಷಕ್ಕೆ ಸೀಮಿತವಾಗದೆ, ಲಿಪಿಗಳು ಮತ್ತು ಪ್ರದೇಶಗಳಾಚೆಗೆ ಹರಡುವ ಈ ಮನೋಭಾವದೊಂದಿಗೆ ನಾವು ಜಾಗತಿಕ ವಿನ್ಯಾಸದ ಸಮೃದ್ಧಿಯನ್ನು ಸಂಭ್ರಮಿಸುತ್ತೇವೆ.
GRANSHAN Bloom Award ತಂಡ